ಡೈಲಿ ವಾರ್ತೆ: 04/ಜುಲೈ /2024

ಭಟ್ಕಳ: ಹೆದ್ದಾರಿಯಿಂದ ತೆಂಗಿನಗುಂಡಿಗೆ ಹೋಗುವ ರಸ್ತೆಯಲ್ಲಿ ಕೃತಕ ನೆರೆ – ಸ್ಥಳೀಯಾಡಳಿತ ನಿರ್ಲಕ್ಷ!

ಭಟ್ಕಳ: ನಗರದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ರಾಷ್ಟ್ರೀಯ ಹೆದ್ದಾರಿಯಿಂದ ತೆಂಗಿನಗುಂಡಿಗೆ ಹೋಗುವ 3 ಕಿ. ಮಿ. ಮದನಿ ಕಾಲೋನಿ ಪರಿಸರ ರಸ್ತೆಯಲ್ಲಿ ಕೃತಕ ನೆರೆ ಉಂಟಾಗಿ ಜನಜೀವನ ಅಸ್ತವ್ಯಸ್ತ ಗೊಂಡಿದೆ.

ಈ ಭಾಗದಲ್ಲಿ ಸಾವಿರಾರು ಮನೆಗಳು, ಶಾಲೆ, ಕಾಲೇಜುಗಳು, ಹಾಗೂ ಆಸ್ಪತ್ರೆ ಕೂಡ ಇವೆ. ಮಳೆ ನೀರು ರಸ್ತೆಯಲ್ಲಿ ತುಂಬಿ ಹರಿಯುತ್ತಿವೆ.

ರಸ್ತೆಯ ಇಕ್ಕೆಳಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದರಿಂದಾಗಿ ಬಾರೀ ಮಳೆಗೆ
ರಸ್ತೆಯಲ್ಲಿ ಹರಿಯುವ ನೀರು ಮನೆ, ಶಾಲೆಗಳಿಗೆ ನುಗ್ಗುತ್ತಿದೆ. ಅಲ್ಲದೆ ಸಾರ್ವಜನಿಕರಿಗೆ ರಸ್ತೆಯಲ್ಲಿ ಓಡಾಡಲು ಕಷ್ಟವಾಗಿದೆ. ರಸ್ತೆಗಳಲ್ಲಿ ನೀರು ತುಂಬಿ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳಾಗಿವೆ.
ಈ ಭಾಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸರಿಯಾದ ನೀರು ಹರಿಯುವ ವ್ಯವಸ್ಥೆ, ಮೋರಿ ಇಲ್ಲ. ಕೆಲವು ಕಡೆ ಇರುವ ಸಣ್ಣ ತೋಡುಗಳ ಹೂಳು ಎತ್ತದೆ ಮಳೆ ನೀರು ಸಾರಾಗವಾಗಿ ಹರಿಯದಂತಾಗಿದೆ. ಪರಿಣಾಮವಾಗಿ ನೀರು ತುಂಬಿ ಕೃತಕ ನೆರೆ ಉಂಟಾಗಿದೆ.

ನಿರ್ಲಕ್ಷ ತೊರಿದ ಸ್ಥಳೀಯಾಡಳಿತ : ಇಲ್ಲಿನ ಕೃತಕ ನೆರೆ ಸಮಸ್ಯೆ ಬಗ್ಗೆ ಸ್ಥಳೀಯಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರತಿಕ್ರಿಯೆ ಇಲ್ಲ. ಇದು ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ ಎಂದು ಸ್ಥಳೀಯರು ದೂರಿದ್ದಾರೆ. ಶಾಲಾ ಮಕ್ಕಳು, ವೃದ್ಧರು ಕೂಡಾ ಹೆಚ್ಚಾಗಿ ಸಂಚಾರಿಸುವ ಈ ಮಾರ್ಗದಲ್ಲಿ ಇದೀಗ ನೆರೆಯಿಂದಾಗಿ ಹೊಂಡ ಗುಂಡಿಗಳು ನೀರು ತುಂಬಿಕೊಂಡು ಅರಿವಿಗೆ ಬಾರದಂತಾಗಿದೆ. ವಾಹನ ಸವಾರರಿಗೂ ಈ ಪರಿಸ್ಥಿತಿ ಭೀತಿ ಮೂಡಿಸಿದೆ. ಇಲ್ಲಿನ ಕೃತಕ ನೆರೆಯಿಂದಾಗಿ ಯಾವುದೇ ಗಂಭೀರ ಅಪಘಾತ, ಪ್ರಾಣ ಹಾನಿ ಸಂಭವಿಸುವುದಕ್ಕಿಂತ
ಮುನ್ನ ಅಧಿಕಾರಿಗಳು ಎಚ್ಛೆತ್ತು ಸಮಸ್ಯೆ ಪರಿಹರಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ..