ಡೈಲಿ ವಾರ್ತೆ: 10/ಜುಲೈ /2024

ಕರಾವಳಿ ಜಿಲ್ಲೆಗಳಲ್ಲಿ ನಿಲ್ಲದ ಮಳೆ ಅಬ್ಬರ: ಸಾಲು ಸಾಲು ಅವಾಂತರಗಳ ಸೃಷ್ಟಿ – ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ ಇಲ್ಲಿದೆ ನೋಡಿ

ಬೆಂಗಳೂರು: ಕರಾವಳಿ ಭಾಗದಲ್ಲಿ ಮಳೆ ಸಾಲು ಸಾಲು ಅವಾಂತರಗಳನ್ನು ಸೃಷ್ಟಿಸಿದೆ. ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜಮೀನು, ಮನೆ, ರಸ್ತೆಗಳನ್ನು ಬಿಡದೇ ಎಲ್ಲವನ್ನೂ ವರುಣ ಆಪೋಷನ ತೆಗೆದುಕೊಳ್ಳುತ್ತಿದ್ದಾನೆ. ಭಾರಿ ಮಳೆಯ ಪರಿಣಾಮ ಕಾರವಾರದ ಕದ್ರಾ ಜಲಾಶಯದಿಂದ ಬಿಟ್ಟು ನೀರು ಅಸ್ನೋಟಿ ಗ್ರಾಮದ ಮನೆಗಳಿಗೆ ನುಗ್ಗಿದೆ. ಕೃಷಿ ಜಮೀನು ಸಂಪೂರ್ಣವಾಗಿ ಜಲಾವೃತವಾಗಿದೆ. ದೇವಸ್ಥಾನದ ಸುತ್ತಲೂ ನೀರು ಆವರಿಸಿದ್ದು, ದೇವರಿಗೂ ಜಲ ದಿಗ್ಬಂಧನವಾಗಿದೆ.

ಸಂತ್ರಸ್ತರನ್ನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದ ಎನ್​​ಡಿಆರ್​ಎಫ್:
ಉತ್ತರ ಕನ್ನಡ ಜಿಲ್ಲೆಯ ಶರಾವತಿ ಹಾಗೂ ಗುಂಡಬಾಳ ನದಿಗಳು ಅಪಾಯದ ಮಟ್ಟ ಮೀರಿವೆ. ಕಡತೋಕ, ಭಾಸ್ಕೇರಿ ಸೇರಿ ಹಲವು ಗ್ರಾಮಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಎನ್​ಡಿಆರ್​ಎಫ್​ ತಂಡ ಸಂತ್ರಸ್ತರನ್ನ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಿದೆ.

ಹೊನ್ನಾವರ ತಾಲೂಕಿನಲ್ಲಿ ಹಿರೆಕಟ್ಟು ಹಾಗೂ ಬಡಗಣಿ ಹಳ್ಳ ಉಕ್ಕಿ ಹರಿದಿದೆ. ಹಳ್ಳದ ನೀರು ಅಡಕೆ, ಭತ್ತದ ಗದ್ದೆಗೆ ನುಗ್ಗಿದ್ದು, ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಾಗಿದೆ.

ಉತ್ತರ ಕನ್ನಡದ ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ಕೃಷಿ ಭೂಮಿ ಜಲಾವೃತಗೊಂಡಿವೆ

ಕಾರವಾರ ತಾಲೂಕಿನ ಗೋಯರ್ ಗ್ರಾಮದಲ್ಲಿ 25ಕ್ಕೂ ಹೆಚ್ಚು ಮನೆಗಳಿವೆ. ಕಾಡಿನ ಮಧ್ಯೆ ಇದ್ದ ಒಂದೇ ಒಂದು ರಸ್ತೆ ಸಂಪರ್ಕವೂ ಸದ್ಯ ಕಡಿತವಾಗಿದೆ.

ಫಾಲ್ಸ್, ಬೀಚ್​ಗಳಿಗೆ ಪ್ರವೇಶ ನಿರ್ಬಂಧ:
ಮಳೆಯಿಂದ, ವಿಭೂತಿ ಫಾಲ್ಸ್​​ನಲ್ಲಿ ಜಲವೈಭವ ಮರುಕಳಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಧಾರಾಕಾರ ಮಳೆಯಿಂದ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಮಂಗಳೂರಿನ ಪಣಂಬೂರು ಬೀಚ್​ನಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಪ್ರವಾಸಿಗರು ಸಮುದ್ರಕ್ಕೆ ಬೇಲಿ ಹಾಕಿದ್ದಾರೆ.

ಮಲಗಿದ್ದಾಗಲೇ ಮನೆ ಕುಸಿದು ತಾಯಿ, ಮಗ ಸಾವು:
ಬೆಳಗಾವಿ ಗಡಿ ಭಾಗದ ಗೋವಾ ಪ್ರದೇಶಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಧಾರಕಾರ ಮಳೆಯಿಂದ ನ್ಯೂರಾ ಮಂಡೋರ್​​​ನಲ್ಲಿ ಮನೆ ಕುಸಿದು, ತಾಯಿ ಮರಿಯಾ ಮಗ ಅಲ್ಫಾರ್ಡ್​​ ಮೃತಪಟ್ಟಿದ್ದಾರೆ. ರಾತ್ರಿ ಊಟ ಮಾಡಿ ಮಲಗಿದ್ದಾಗಲೇ ಅನಾಹುತ ನಡೆದಿದೆ.

ಪಂಚಗಂಗಾ’ ಪ್ರವಾಹ; ನಿಪ್ಪಾಣಿ ಭಾಗದಲ್ಲಿ ನೆರೆ ಆತಂಕ
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಪಂಚಗಂಗಾ ನದಿ ಪ್ರಚಂಡ ರೂಪ ತಾಳಿದೆ. 32 ಅಡಿಗಿಂತ ಹೆಚ್ಚಿಗೆ ನೀರಿನ ಹರಿವು ಏರಿದ್ದು, ಸೇತುವೆಗಳು ಜಲಾವೃತಗೊಂಡಿವೆ. ಇದರಿಂದ ನಿಪ್ಪಾಣಿಯ ಹಲವು ಗ್ರಾಮಗಳಲ್ಲಿ ಪ್ರವಾಹದ ಆತಂಕ ಮನೆಮಾಡಿದೆ. ವಾರದಿಂದ ಸುರಿಯುತ್ತಿರುವ ಮಳೆಗೆ ಬೆಳಗಾವಿ ಜಿಲ್ಲೆ ಖಾನಾಪುರ ವ್ಯಾಪ್ತಿಯಲ್ಲಿ ಮನೆಗಳಿಗೆ ಹಾನಿಯಾಗಿದೆ.

ಘಟಪ್ರಭೆ ಪ್ರತಾಪದಿಂದ ಹುಕ್ಕೇರಿಯ ಹುಣ್ಣೂರಿನಲ್ಲಿರುವ ವಿಠ್ಠಲನ ಮಂದಿರ ಸಂಪೂರ್ಣವಾಗಿ ಮುಳುಗಿದೆ. 148 ಅಡಿ ಎತ್ತರದ ದೇಗುಲದಲ್ಲಿ ಸದ್ಯ, ನಾಲ್ಕು ಅಡಿಗಳ ಗೋಪುರ ಮಾತ್ರ ಕಾಣುತ್ತಿದೆ.

ತುರ್ತು ವಿಪತ್ತು ನಿರ್ವಹಣೆಗೆ ಸಿಎಂ ಸೂಚನೆ:
ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ವಿಧಾನಸೌಧದಲ್ಲಿ ಅಧಿಕಾರಿಗಳ ಜೊತೆ ಮಂಗಳವಾರ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. ನೆರೆ, ಮನೆಗಳಿಗೆ ಹಾನಿ, ವಿಪತ್ತು ನಿರ್ವಹಣೆ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಸದ್ಯ ಮಳೆಯಿಂದ 3,714 ಮನೆಗಳಿಗೆ ಹಾನಿಯಾಗಿದೆ. ನೆರೆ ಉಂಟಾಗುವ ಸ್ಥಳಗಳನ್ನ ಮೊದಲೇ ಗುರುತಿಸಿದ್ದೇವೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣವಿದೆ. ಎಸ್​ಡಿಆರ್​ಎಫ್​ನಡಿ ಪರಿಹಾರ ನೀಡಲು‌ ಸೂಚಿಸಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.