ಡೈಲಿ ವಾರ್ತೆ: 10/ಜುಲೈ /2024

ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಪತ್ರಿಕಾ ದಿನಾಚರಣೆ: ರಂಗಪ್ಪಯ್ಯ ಹೊಳ್ಳರಿಗೆ ಸನ್ಮಾನ – ವಿದ್ಯಾರ್ಥಿಗಳಿಗೆ ಮಾಧ್ಯಮ ಕ್ಷೇತ್ರದಲ್ಲಿ ಸುವರ್ಣಾವಕಾಶ: ಶ್ರೀರಾಜ್ ಗುಡಿ

ಕೋಟ: ಮಾಧ್ಯಮ ಎನ್ನವುದು ಒಂದು ಸಂವಹನ ಕ್ಷೇತ್ರ. ಅದು ಸಾಕಷ್ಟು ಬದಲಾವಣೆಗೊಂಡಿದೆ ಎಂದು ಮಣಿಪಾಲ ಎಂ.ಐ.ಸಿ. ವಿಭಾಗದ ಉಪನ್ಯಾಸಕ ಶ್ರೀರಾಜ್ ಗುಡಿ ಹೇಳಿದರು.

ಅವರು ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘ ಆಶ್ರಯದಲ್ಲಿ ಜು. 10 ರಂದು ಬುಧವಾರ ಕೋಟ ವಿವೇಕ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ
ಮಾಧ್ಯಮ ಕ್ಷೇತ್ರ ಎನ್ನುವುದು ಕೇವಲ ದೂರದರ್ಶನ, ಪತ್ರಿಕೆಗಳಿಗೆ ಸೀಮಿತವಾಗಿಲ್ಲ. ಇದನ್ನು ಹೊರತುಪಡಿಸಿ ಸಿನಿಮಾ, ಜಾಹೀರಾತು,ಅನಿಮೇಷನ್ ಮೊದಲಾದ
ವಿಭಾಗದಲ್ಲಿ ಹತ್ತಾರು ಕೋರ್ಸ್‌ಗಳಿದೆ. ಸಾವಿರಾರು ಉದ್ಯೋಗವಕಾಶಗಳಿದೆ. ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಮಾಧ್ಯಮವನ್ನು ಕೇವಲ ಕಾಮಾಲೆ ಕಣ್ಣಿನಿಂದ ನೋಡಿ ಬರೆಯುವ ಮನಃಸ್ಥಿತಿ ದೂರ ಮಾಡಿಕೊಂಡು ಇಲ್ಲಿರುವ ಉತ್ತಮ ಅವಕಾಶಗಳನ್ನು ಸ್ವೀಕರಿಸಬೇಕು ಎಂದರು.

ಈ ಸಂದರ್ಭ ಹಿರಿಯ ಪತ್ರಕರ್ತ ಕೋಟ ರಂಗಪ್ಪಯ್ಯ ಹೊಳ್ಳ ಅವರಿಗೆ ಪತ್ರಿಕಾ ದಿನಾಚರಣೆ ಪ್ರಯುಕ್ತ ಕೊಡಮಾಡುವ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕೋಟ ವಿವೇಕ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜಗದೀಶ ನಾವಡ ಸಮ್ಮಾನ ನೆರವೇರಿಸಿದರು.

ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲೂ ನೂರಾರು ಕಷ್ಟ-ನಷ್ಟಗಳಿದೆ. ಆದರೆ ಟೀಕೆ ಮಾಡುವವರಿಗೆ
ಮಾಧ್ಯಮದ ಕೆಟ್ಟ ಅಂಶಗಳು ಮಾತ್ರ ಸಿಗುತ್ತದೆ ಹೊರತು ಒಳ್ಳೆಯ ವಿಚಾರಗಳು ಸಿಗುವುದಿಲ್ಲ. ಯಾವುದೇ ಕ್ಷೇತ್ರವಿದ್ದರು ಒಳಿತು-ಕೆಡುಕು ಎರಡನ್ನು ವಿಮರ್ಶೆ
ಮಾಡಬೇಕು ಎಂದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಸಂಘದ ಆಡಳಿತ ಮಂಡಳಿ ಸದಸ್ಯ ಚಿತ್ತೂರು ಪ್ರಭಾಕರ ಆಚಾರ್ಯ, ಪತ್ರಕರ್ತರಾದ
ರವೀಂದ್ರ ಕೋಟ, ಕೆ.ಜಿ.ವೈದ್ಯ, ಇಬ್ರಾಹಿಂ ಕೋಟ, ಪ್ರವೀಣ್ ಮುದ್ದೂರು, ಆದಿತ್ಯ ಐತಾಳ್ ಮೊದಲಾದವರಿದ್ದರು.

ಸಂಘದ ಸದಸ್ಯರಾದ ಮೋಹನ ಉಡುಪ ಸ್ವಾಗತಿಸಿ, ವಸಂತ್ ಗಿಳಿಯಾರು ಪ್ರಾಸ್ತಾವಿಕ
ಮಾತನಾಡಿದರು. ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಹರೀಶ್
ಕಿರಣ್ ತುಂಗ ವಂದಿಸಿದರು.