ಡೈಲಿ ವಾರ್ತೆ: 21/ಜುಲೈ /2024

ಸಿಎಂ ನನ್ನ ಮೇಲೆ ಮಾಡಿರುವ ಆರೋಪವನ್ನು ಹಿಂಪಡೆಯ ಬೇಕು: ಇಲ್ಲವೇ ಸಿಬಿಐ ತನಿಖೆಗೆ ವಹಿಸಬೇಕು – ಇಲ್ಲದಿದ್ದರೆ ಧರಣಿ ಸತ್ಯಾಗ್ರಹ ನಡೆಸುವೆ: ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಮಂಡಲದಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪವನ್ನು ಹಿಂಪಡೆಯಬೇಕು, ಇಲ್ಲವೇ ನನ್ನ ಮೇಲಿನ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು. ಇಲ್ಲದಿದ್ದರೆ ಮುಂದಿನ ವಾರ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುವೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ನಾನು ಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ನನ್ನ ಬಗ್ಗೆಯಾಗಲಿ ಅಥವಾ ನನ್ನ ಇಲಾಖೆಯ ಬಗ್ಗೆಯಾಗಲಿ ಈಗ ಮಾಡುತ್ತಿರುವ ಆರೋಪದ ಬಗ್ಗೆ ಯಾವುದೇ ಮಾತುಗಳನ್ನು ಆಡಿಲ್ಲ.

ನನ್ನ ಅವಧಿಯಲ್ಲಿ ಸಿಐಡಿಗೆ ಹಸ್ತಾಂತರಿಸಿದ್ದ ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದ್ದು ಹೊಸ ಸರಕಾರ ಬಂದು ಒಂದು ವರ್ಷ ದಾಟಿದೆ. ಈ ಸಮಯದಲ್ಲಿ ನಾನು ಭ್ರಷ್ಟಾಚಾರ ಎಸಗಿದ್ದು ಕಂಡು ಬಂದಿದ್ದರೆ ನನ್ನನ್ನು ಜೈಲಿಗಟ್ಟಲು ತಮಗೆ ಅಧಿಕಾರವಿತ್ತು. ಆದರೆ ಅದೆಲ್ಲ ಬಿಟ್ಟು ಇದೀಗ ತಾವು ಆರೋಪಕ್ಕಾಗಿ ಆರೋಪ ಎಂಬ ಮಾದರಿಯಲ್ಲಿ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ವಹಿಸಿದ್ದು ಸಹಜವಾಗಿಯೇ ನನಗೆ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಕೊಳವೆ ಬಾವಿ ಟೆಂಡರ್‌ ಪ್ರಕ್ರಿಯೆಯ ಬಗ್ಗೆ ಹಾಲಿ ಸಚಿವ ಪ್ರಿಯಾಂಕ್‌ ಖರ್ಗೆ ಆರೋಪ ಮಾಡಿದಾಗ ಆಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ವಿನಂತಿಸಿ ನಾನೇ ಸಿಐಡಿ ತನಿಖೆಗೆ ಶಿಫಾರಸು ಮಾಡಿರುವುದು ಸರಕಾರದ ಕಡತದಲ್ಲಿದೆ. ಕೊಳವೆ ಬಾವಿ ಫ‌ಲಾನುಭವಿಗಳ ಖಾತೆಗೆ ನೇರ ಹಣ ಜಮಾ ಮಾಡುವ ವ್ಯವಸ್ಥೆ ನನ್ನ ಅವಧಿಯಲ್ಲಿ ಜಾರಿಗೆ ಬಂದಿತ್ತು. ಭೋವಿ ನಿಗಮದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತಾವು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನೇಮಿಸಿದ್ದ ನಿಗಮದ ಅಧಿಕಾರಿಗಳಿಬ್ಬರು ಭ್ರಷ್ಟಾಚಾರದಲ್ಲಿ ತೊಡಗಿರುವುದು ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದ್ದಂತೆ ನಾನು ಸಂಬಂಧಿತರನ್ನು ಅಮಾನತಿನಲ್ಲಿಟ್ಟು ಇಡೀ ಪ್ರಕರಣವನ್ನು ಸಿಐಡಿಗೆ ನೀಡಿದ್ದೆ ಎಂದು ಪತ್ರದಲ್ಲಿ ಉಲ್ಲೇಖೀಸಿದ್ದಾರೆ.