ಡೈಲಿ ವಾರ್ತೆ: 21/ಜುಲೈ /2024

ಬಂಟ್ವಾಳದಲ್ಲಿ ಅಕ್ರಮ ಗಣಿಗಾರಿಕೆ – ಹೈರಾಣದ ನಾಗರಿಕರು!

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಅಕ್ರಮ ಗಾಣಿಗರಿಕೆ, ಹೆಬ್ಬಂಡೆಗಳ ಸ್ಫೋಟಗಳಿಂದ ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದಾರೆ. ಈ ಪರಿಸರದ ಹಲವಾರು ಮನೆಗಳ ಗೋಡೆ, ಚಾವಣಿಗಳು ಬಿರುಕು ಬಿಟ್ಟಿದ್ದು, ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಯಾವ ಕ್ಷಣದಲಾದರೂ ಕುಸಿದು ಬೀಳುವ ಸಂಭವವಿದೆ. ನಿವಾಸಿಗಳು ಸದಾ ಪ್ರಾಣ ಭಯದಿಂದ ತಲ್ಲಣಿಸುವಂತಾಗಿದೆ. ಇಷ್ಟೆಲ್ಲ ಆಗುತ್ತಿರುವುದೂ ಓರ್ವ ಅಕ್ರಮ ದಂಧೆಕೋರ ಪ್ರಭಾವೀ ವ್ಯಕ್ತಿಯಿಂದ ಮತ್ತು ಅವನು ಎಸೆಯುವ ‘ಬಿಸ್ಕಿಟ್’ ನಿಂದಾಗಿ ನಿಷ್ಕ್ರಿಯರಾಗಿರುವ ಅಧಿಕಾರಿಗಳಿಂದಾಗಿ.

ಉಳ್ಳಾಲ ತಾಲೂಕು ಇರಾ ಗ್ರಾಮದ ಕೊಕ್ಕಾಜೆ ಸೈಟ್ ಮನೆಯ ನಿವಾಸಿ ಕೆ. ಬಿ. ಸುಲೈಮಾನ್ ಎಂಬವನೇ ಈ ಎಲ್ಲ ಅಕ್ರಮಗಳ ಪ್ರಧಾನ ಸೂತ್ರದಾರ ಎನ್ನಲಾಗಿದೆ. ಈತನು ಸ್ಥಳೀಯ ಆಡಳಿತಗಳು, ಸಂಬಂಧಿತ ಇಲಾಖೆಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇತ್ಯಾದಿ ಯಾವುದೇ ತೆರನಾದ ಅಧಿಕೃತರಿಂದ ಪರವಾನಿಗೆ ಪಡೆಯದೆ ಬಂಟ್ವಾಳ ತಾಲೂಕಿನ ಮಯ್ಯರ ಬೈಲು, ಪಾಣೆ ಮಂಗಳೂರು, ವಿಟ್ಲ ಮತ್ತಿತರ ಕಡೆಗಳಲ್ಲಿನ ಸ್ಥಳಗಳಲ್ಲಿನ ದೊಡ್ಡ ದೊಡ್ಡ ಗಾತ್ರದ ಬಂಡೆ ಕಲ್ಲುಗಳನ್ನು ಸ್ಪೋಟಕ ಬಳಸಿ ಒಡೆದು ಸಣ್ಣ ಸಣ್ಣ ಜಲ್ಲಿಗಳನ್ನಾಗಿಸಿ ಹೊರ ರಾಜ್ಯಕ್ಕೆ ರವಾನಿಸುತ್ತಿದ್ದಾನೆ ಎನ್ನಲಾಗಿದೆ. ಈತ ಬಂಡೆ ಒಡೆಯಲು ಉಪಯೋಗಿಸುವ ಶಕ್ತಿಯುತ ಸ್ಫೋಟಕಗಳಿಂದಾಗಿ ಆಯಾ ಪರಿಸರದಲ್ಲಿನ ಹಲವು ಮನೆಗಳ ಗೋಡೆಗಳು, ಚಾವಣಿಗಳು ಬಿರುಕು ಬಿಟ್ಟು, ಕುಸಿಯುವ ಹಂತ ತಲುಪಿವೆ. ಮಾಡಿನ ಹಂಚುಗಳೂ ಒಡೆದು ಬೀಳತೊಡಗಿವೆ. ಇದರಿಂದ ತೊಂದರೆಗೊಳಗಾದ ಸ್ಥಳೀಯ ನಿವಾಸಿಗಳು ಬಂಟ್ವಾಳ ತಹಸೀಲ್ದಾರರು, ಬಂಟ್ವಾಳ ಕಂದಾಯ ನಿರೀಕ್ಷಕರು, ಪುರಸಭಾ ಮುಖ್ಯಧಿಕಾರಿಗಳು, ದ. ಕ. ಜಿಲ್ಲಾಧಿಕಾರಿಗಳವರೆಗೂ ದೂರು ಸಲ್ಲಿಸಿದ್ದಾರೆ. ಆದರೆ, ಪರಿಣಾಮ ಶೂನ್ಯವಾಗಿದೆ. ಸುಲೈಮಾನನ ಅಕ್ರಮ ಕಾರ್ಯಗಳು ಎಗ್ಗಿಲ್ಲದೇ ಸಾಗಿವೆ. ನಿವಾಸಿಗಳಿಗೆ ಹಾನಿಯೂ ಹೆಚ್ಚುತ್ತಿದೆ. ಸುಲೈಮಾನ್ ಭಾರೀ ಧನಬಲ ಮತ್ತು ಜನಬಲ ಹೊಂದಿದ್ದು, ಯಾವ ಅಧಿಕಾರಿಯೂ ಆತನ ವಿರುದ್ದ ಕ್ರಮ ಜರುಗಿಸುತ್ತಿಲ್ಲ. ಮಾತ್ರವಲ್ಲ, ಆತನ ವಿರುದ್ಧ ದೂರು ನೀಡಿದವರ ವಿರುದ್ಧವೇ ಸುಲೈಮಾನ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಿರುಕುಳ ನೀಡುತ್ತಿದ್ದಾನೆ ಎನ್ನಲಾಗಿದೆ. ಆಮಿಷಕ್ಕೊಳಗಾಗಿರುವ ಪೊಲೀಸ್ ಅಧಿಕಾರಿಗಳು ವಿವೇಚನಾ ರಹಿತರಾಗಿ ವರ್ತಿಸುತ್ತಿದ್ದಾರೆ ಎಂದೂ ಆರೋಪಿಸಲಾಗಿದೆ.

ಬಂಟ್ವಾಳ ಮೂಡ ಗ್ರಾಮದ ಸರ್ವೇ ನಂಬ್ರ 332/4 ರಲ್ಲಿನ ಜಮೀನಿನಲ್ಲಿ ಪರಿಸರ ಸ್ನೇಹಿಯಾಗಿರುವ ದೊಡ್ಡ ದೊಡ್ಡ ಬಂಡೆ ಗಳನ್ನು ಸ್ಪೋಟಿಸಿ ಜಲ್ಲಿ ಮಾಡಲಾಗಿದೆ. ಪಾಣೆ ಮಂಗಳೂರು – ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ ಬಳಿ, ನೂತನ ಸೇತುವೆಯ ಬಳಿಯೇ ಬಂಡೆ ಸ್ಪೋಟಿಸಲಾಗಿದೆ. ಇದರಿಂದಾಗಿ ಹೆದ್ದಾರಿ ಮತ್ತು ಸೇತುವೆಗೂ ಹಾನಿಯಾಗಿದೆ. ಆದರೆ ಸಂಬಂಧಿತ ಆಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ!

ಈ ಅಕ್ರಮಗಳಿಂದ ತೀವ್ರ ಹಾನಿಗೊಳಗಾದ ಸ್ಥಳೀಯರಾದ ಕೃಷ್ಣ ಕುಮಾರ್ ಸೋಮಯಾಜಿ, ಪದ್ಮನಾಭ ಮೂಲ್ಯ, ಆನಂದ, ಸಂತೋಷ್ ಹಾಗೂ ಇನ್ನಿತರರು ಸುಲೈಮಾನ್ ನ ಅಕ್ರಮಗಳ ವಿರುದ್ಧ ಈಗಾಗಲೇ ದೂರು ನೀಡಿದ್ದಾರೆ. ಆದರೆ ಪರಿಣಾಮವೇನೂ ಇಲ್ಲ.

ಅಂತರ್ ರಾಷ್ಟ್ರೀಯ ಮಾನವ ಹಕ್ಕು ಮತ್ತು ಮೀಡಿಯಾ ಆರ್ಗನೈಸೇಷನ್ ಸದಸ್ಯ, ಆರ್ ಟಿ ಐ ಕಾರ್ಯಕರ್ತ ಮಹಮ್ಮದ್ ಖಾಲಿದ್, ನಂದಾವರ ಎಂಬವರು ಸುಲೈಮಾನ್ ನ ಈ ಎಲ್ಲಾ ಅಕ್ರಮಗಳ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಿಂದ ಜುಲೈ 16 ರಂದು ದೂರು ಸ್ವೀಕೃತಿಯನ್ನೂ ಪಡೆದಿದ್ದಾರೆ. ಇದುವರೆಗೂ ಪರಿಹಾರ ಮಾರ್ಗ ಇಲ್ಲ. ಅದಕ್ಕಾಗಿ ಸಂತ್ರಸ್ತರು ಜು. 20 ರಂದು ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಖುದ್ದಾಗಿ ದೂರು ಸಲ್ಲಿಸಿದ್ದಾರೆ. ಆ ದೂರಿನ ಅನ್ವಯ ಪೊಲೀಸ್ ವರಿಷ್ಠಾಧಿಕಾರಿಗಳು ಬಂಟ್ವಾಳ ಟೌನ್ ವೃತ್ತ ನಿರೀಕ್ಷಕರಿಗೆ ಮೂರು ದಿನದೊಳಗೆ ಅಕ್ರಮ ಗಣಿಗಾರಿಕೆಗೆ ನೀಡಿದ ಪರ್ಮಿಷನ್ ಹಾಗೂ ಲೈಸನ್ಸ್ ಹಾಜರುಪಡಿಸುವಂತೆ ಸೂಚಿಸಿದ್ದಾರೆ.

ಸಂತ್ರಸ್ತರ ಪರವಾಗಿ ದೂರು ಸಲ್ಲಿಸಿದ ಮಹಮ್ಮದ್ ಖಾಲಿದ್ ರ ಬಗ್ಗೆ ಸುಲೇಮಾನ್ ಹಾಗೂ ಧನುಷ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಮಾನಹರಾಜು ಮಾಡುತ್ತಿರುವ ಹಾಗೂ ಜೀವ ಬೆದರಿಕೆ ಒಡ್ಡುತ್ತಿರುವ ಬಗ್ಗೆ ಇಂದು ದೂರು ದಾಖಲಿಸಲಾಗಿದೆ.

ಒಟ್ಟಿನಲ್ಲಿ ಬಂಟ್ವಾಳದ ಈ ವಿಚಿತ್ರ ಪ್ರಕರಣ ಅಕ್ರಮ ದಂಧೆಕೋರರನ್ನು ಪ್ರೋತ್ಸಾಹಿಸಿ, ಕಾನೂನುಬದ್ಧ ಅಧಿಕಾರ ಹೊಂದಿರುವ ಇಲಾಖೆಗಳು, ಅಧಿಕಾರಿಗಳನ್ನು ನಿಷ್ಕ್ರಿಯಗೊಳಿಸಿ, ಅಮಾಯಕರನ್ನು ಭಯಪಡಿಸಿ, ಪರಿಸರವನ್ನೇ ನುಂಗುತ್ತಿದೆ. ಇದರ ಅಂತ್ಯ ಹೇಗಾಗುವುದೋ ಕಾದು ನೋಡಬೇಕು.