ಡೈಲಿ ವಾರ್ತೆ: 24/ಜುಲೈ /2024
ಲೇಡಿಸ್ ಪಿಜಿಗೆ ನುಗ್ಗಿ ಕತ್ತು ಕೊಯ್ದು ಯುವತಿಯ ಬರ್ಬರ ಹತ್ಯೆ!
ಬೆಂಗಳೂರು: ಲೇಡಿಸ್ ಪಿಜಿಯೊಂದಕ್ಕೆ ನುಗ್ಗಿದ ದುಷ್ಕರ್ಮಿ ಯುವತಿಯ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾದ ಘಟನೆ ಕೋರಮಂಗಲದಲ್ಲಿರುವ ಲೇಡಿಸ್ ಪಿಜಿಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಬಿಹಾರ ಮೂಲದ ಕೃತಿ ಕುಮಾರಿ (24) ಎಂದು ಗುರುತಿಸಲಾಗಿದೆ.
ಕೃತಿ ಕುಮಾರಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೋರಮಂಗಲದ ವಿಆರ್ ಲೇಔಟ್ ನ ಪಿಜಿಯಲ್ಲಿ ವಾಸವಾಗಿದ್ದರು. ರಾತ್ರಿ ಸುಮಾರು 11 ಗಂಟೆಗೆ ಯುವಕನೋರ್ವ ಚಾಕು ಇಟ್ಟುಕೊಂಡು ಯುವತಿ ಇದ್ದ ಲೇಡಿಸ್ ಪಿಜಿಯೊಳಗೆ ನುಗ್ಗಿದ್ದು 3ನೇ ಮಹಡಿಯಲ್ಲಿರುವ ಕೃತಿ ಕುಮಾರಿ ಅವರ ಕೊಠಡಿ ಬಳಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ.
ತೀವ್ರ ಗಾಯಗೊಂಡ ಕೃತಿ ಕುಮಾರಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಬಳಿಕ ಯುವಕ ಪರಾರಿಯಾಗಿದ್ದಾನೆ. ಪರಿಚಯಸ್ಥ ಯುವಕನಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದೆ ಪಿಜಿ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದೇ ಘಟನೆಗೆ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಘಟನಾ ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಧಾವಿಸಿ ಮಾಹಿತಿ ಕಲೆ ಹಾಕಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಯುವಕನ ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.