ಡೈಲಿ ವಾರ್ತೆ: 30/ಜುಲೈ /2024
ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆ – ಸ್ಥಳೀಯರಲ್ಲಿ ಪ್ರವಾಹದ ಭೀತಿ!
ಬಂಟ್ವಾಳ: ಸೋಮವಾರ ರಾತ್ರಿಯಿಂದ ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಅಪಾಯದ ಮಟ್ಟದಲ್ಲಿ 8.5 ಆಗಿದ್ದು ಮಂಗಳವಾರ ಸಂಜೆ ವೇಳೆಗೆ ನೀರಿನ ಮಟ್ಟ 10 ಮೀ. ನಲ್ಲಿ ಹರಿಯುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ.
ಈಗಾಗಲೇ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ತಾಲೂಕಿನ ಬಂಟ್ವಾಳ ಪೇಟೆ, ಕೆಳಗಿನ ಪೇಟೆ, ನಾವೂರು, ಮಣಿಹಳ್ಳ, ಜಕ್ರಿಬೆಟ್ಟು, ಕಂಚಿಕಾರ ಪೇಟೆ, ಸರಪಾಡಿ, ಅಜಿಲಮೊಗರು, ಬಸ್ತಿಪಡ್ಪು, ಚೆಂಡ್ತಿಮಾರು, ಮಣಿನಾಲ್ಕೂರು, ಅಮ್ಟಾಡಿ, ಬರಿಮಾರು, ಭಂಡಾರಿ ಬೆಟ್ಟು, ಪಾಣೆಮಂಗಳೂರು, ಜೈನರ ಪೇಟೆ, ಗೂಡಿನ ಬಳಿ, ಆಲಡ್ಕ, ನಂದಾವರ , ಬೋಗೋಡಿ ಮೊದಲಾದ ಪ್ರದೇಶಗಳಲ್ಲಿ ಮನೆ, ಅಂಗಡಿ ಹಾಗೂ ಕೃಷಿ ಭೂಮಿಗೆ ನೀರು ನುಗ್ಗಿದೆ.
ಬಂಟ್ವಾಳ ತಾಲೂಕು ಆಡಳಿತ ಬಂಟ್ವಾಳ ಹೋಬಳಿಯಲ್ಲಿ 20 ಮತ್ತು ಪಾಣೆಮಂಗಳೂರು ಹೋಬಳಿಯಲ್ಲಿ 22 ಒಟ್ಟು 42 ಕುಟುಂಬಗಳನ್ನು ಮನೆಯಿಂದ ತೆರವುಗೊಳಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ವೀರಕಂಭ ಗ್ರಾಮದ ಪಾತ್ರತೋಟ ಎಂಬಲ್ಲಿ ಪಿಡಬ್ಲ್ಯೂಡಿ ರಸ್ತೆಗೆ ಗುಡ್ಡ ಜರಿದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದ್ದು ವಿದ್ಯುತ್ ಕಂಭಗಳು ಬಿದ್ದು ರಸ್ತೆ ಸಂಚಾರಕ್ಕೆ ತೊಡಕಾಗಿದೆ. ಬಂಟ್ವಾಳ ಕಸಬಾ ಅಗ್ರಾರದಿಂದ ಜಕ್ರಿಬೆಟ್ಟು ರಸ್ತೆ ಗುಡ್ಡ ಕುಸಿತ ಆಗಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೊಡಾಜೆ (ಪೆರಾಜೆ ಮಠ ತಿರುವಿನಲ್ಲಿ) ಮಳೆ ನೀರು ಸರಾಗವಾಗಿ ಹರಿಯಲು ತೊಡಕಾಗಿ ನೀರು ರಸ್ತೆಗೆ ಬಂದು ವಾಹನ ಸಂಚಾರಕ್ಕೆ ತೊಡಕಾಗಿದೆ. ಬಂಟ್ವಾಳ ಕಸಬಾ ಗ್ರಾಮದ ನಾರಾಯಣ ಪೂಜಾರಿ ಬಿನ್ ತಿಮ್ಮಪ್ಪ ಪೂಜಾರಿ ಅವರ ವಾಸ್ತವ್ಯದ ಮನೆ ಬಳಿ ಬರೆ ಜರಿದಿದ್ದು ಮನೆಯವರನ್ನು ಸ್ಥಳಾಂತರ ಮಾಡಲಾಗಿದೆ. ವೀರಕಂಭ ಗ್ರಾಮದ ಮಂಗಲಪದವು ಪಾದೆ ಎಂಬಲ್ಲಿ ಗೀತಾರವರ ಮನೆ ಬದಿ ಗುಡ್ಡ ಜರಿದು ಮನೆ ಭಾಗಶ: ಹಾನಿಯಾಗಿದೆ. ಮಾಣಿ ಗ್ರಾಮದ ನೆಲ್ಲಿ ಎಂಬಲ್ಲಿ ಶೇಖರ ಶೆಟ್ಟಿ ಬಿನ್ ಸಂಜೀವ ಶೆಟ್ಟಿ ಎಂಬುವವರ ವಾಸ್ತವ್ಯದ ಮನೆ ಮಳೆಯಿಂದಾಗಿ ಪೂರ್ಣ ಹಾನಿಗೊಂಡಿರುತ್ತದೆ. ಸದ್ರಿರವರು ಒಬ್ಬರೇ ವಾಸ್ತವ್ಯವಿದ್ದು, ಪ್ರಸ್ತುತ ಸಹೋದರನ ಮನೆಗೆ ವಾಸ್ತವ್ಯ ಬದಲಾವಣೆ ಮಾಡಲಾಗಿದೆ. ಬಂಟ್ವಾಳ ಕಸಬಾ ಗ್ರಾಮದ ಗೀತಾ ಕೋಮ್ ರಾಮಚಂದ್ರ ಅವರ ವಾಸ್ತವ್ಯದ ಮನೆಯ ಹಂಚು ಮೇಲ್ಛಾವಣಿಗೆ ಭಾಗಶಃ ಹಾನಿ ಆಗಿರುತ್ತದೆ. ಶಂಭೂರು ಗ್ರಾಮದ ಕೊಪ್ಪಳ ಎಂಬಲ್ಲಿ ಸುಜಾತ ಕೊಂ ಕೇಶವ ಆಚಾರ್ಯ ರವರ ವಾಸದ ಮನೆಗೆ ತೀವ್ರ ಹಾನಿ ಆಗಿರುತ್ತದೆ. ನೆಟ್ಲಮುಡ್ನೂರು ಗ್ರಾಮದ ಭಗವಂತ ಕೋಡಿ ನಿವಾಸಿ ಉಮ್ಮರ್ ಅವರು ಮನೆ ಪಕ್ಕದ ಗುಡ್ಡ ಜರಿದು ಮನೆಗೆ ಹಾನಿಯಾಗಿದೆ. ಯಾವುದೇ ಪ್ರಾಣ ಹಾನಿ ಆಗಿರುವುದಿಲ್ಲ.
ಶಿಥಿಲಗೊಂಡ ಗೋಡೆಯಿರುವ ಕಟ್ಟಡಗಳು, ದುರ್ಬಲ ಶೀಟುಗಳು, ವಿದ್ಯುತ್ ಅಪಾಯದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಸಮರ್ಪಕವಾಗಿ ಇರುವ ತರಗತಿ ಕೊಠಡಿಗಳಲ್ಲಿ ಮಾತ್ರ ವಿದ್ಯಾರ್ಥಿಗಳನ್ನು ಕೂರಿಸಬೇಕು ಎಂದು ಕ್ಲಸ್ಟರ್ ಹಾಗೂ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಿಲಾಗಿದೆ ಎಂದು ತಹಶೀಲ್ದಾರ್ ಅರ್ಚನಾ ಭಟ್ ಸೂಚಿಸಿದ್ದಾರೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈ ಅವರು ನೆರೆಪೀಡಿತ ವಿವಿಧ ಪ್ರದೇಶಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೆರವುಗೊಳಿಸಲಾದ ಮನೆಗಳ ಕುಟುಂಬಸ್ಥರಿಗೆ ಸೂಕ್ತ ಬದಲಿ ವ್ಯವಸ್ಥೆ ಮಾಡುವಂತೆ ಹಾಗೂ ತಕ್ಷಣ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.