ಡೈಲಿ ವಾರ್ತೆ: 30/ಜುಲೈ /2024

ವಯನಾಡು: ಪ್ರವಾಹ ಬರುತ್ತಿದ್ದಂತೆ ಮನೆಯವರನ್ನು ರಕ್ಷಿಸಿ ತಾನು ನೀರಲ್ಲಿ ಕೊಚ್ಚಿಹೋದ ಹಸು!

ಚಾಮರಾಜನಗರ: ಹಸುವೊಂದು ಅಂಬಾ ಎಂದು ಅರಚಿಕೊಂಡು ಮನೆಯಲ್ಲಿದ್ದವರನ್ನು ರಕ್ಷಿಸಿ ತಾನು ನೀರಿನಲ್ಲಿ ಕೊಚ್ಚಿಕೊಂಡು ಹೋದ ಹೃದಯ ವಿದ್ರಾವಕ ಘಟನೆ ಕೇರಳ ವಯನಾಡು ಜಿಲ್ಲೆ ಗುಡ್ಡ ಕುಸಿತ ಪ್ರಕರಣದಲ್ಲಿ ನಡೆದಿದ್ದು, ಅಲ್ಲಿ ಪಾರಾದವರು ಚಾಮರಾಜನಗರ ಪಟ್ಟಣದ ಉಪ್ಪಾರ ಬೀದಿಯವರ ಹತ್ತಿರದ ಸಂಬಂಧಿಗಳಾಗಿದ್ದಾರೆ.

ಚಾಮರಾಜನಗರ ಪಟ್ಟಣದ ಉಪ್ಪಾರ ಬೀದಿಯ ಲಕ್ಷ್ಮಮ್ಮ ಅವರು ವಯನಾಡು ಜಿಲ್ಲೆಯ ಮೇಪ್ಪಾಡಿಯ ಕೃಷ್ಣಾ ಎಂಬುವವರನ್ನು ಮದುವೆಯಾಗಿದ್ದಾರೆ. ಲಕ್ಷ್ಮಮ್ಮ ಅವರ ಮಗಳು ಪ್ರವೀದಾ ಅವರು ಮೇಪ್ಪಾಡಿಯಿಂದ 4 ಕಿ.ಮೀ. ದೂರದ ಚೂರಲ್‌ಮಲಾದ ವಿನೋದ್ ಅವರನ್ನು ವಿವಾಹವಾಗಿದ್ದಾರೆ.

ಹೆರಿಗೆಗೆಂದು ಮೆಪ್ಪಾಡಿಯಲ್ಲಿನ ತಾಯಿ ಮನೆಗೆ ಪ್ರವೀದಾ ಬಂದಿದ್ದರು. ಪ್ರವೀದಾ ಪತಿ ವಿನೋದ್ ಚೂರಲ್‌ಮಲಾದಲ್ಲೇ ಇದ್ದರು. ಸೋಮವಾರ ಮಧ್ಯರಾತ್ರಿ ವಿನೋದ್ ಅವರ ಕೊಟ್ಟಿಗೆಯಲ್ಲಿದ್ದ ಹಸು ಒಂದೇ ಸಮನೆ ಅರಚಿಕೊಂಡಿದೆ. ಆಗ ನಿದ್ದೆಯಿಂದ ಎಚ್ಚರಗೊಂಡ ವಿನೋದ್ ಕೊಟ್ಟಿಗೆಗೆ ಹೋಗಿ ನೋಡಿದ್ದಾರೆ. ಕೊಟ್ಟಿಗೆಗೆ ನೀರು ತುಂಬಿಕೊಳ್ಳುತ್ತಿರುವುದನ್ನು ನೋಡಿದ ವಿನೋದ್ ತಕ್ಷಣ ತಮ್ಮ ಕುಟುಂಬದವರನ್ನು ಎತ್ತರದ ಗುಡ್ಡ ಕ್ಕೆ ಕರೆದೊಯ್ದು ಅಪಾಯದಿಂದ ಪಾರಾಗಿದ್ಧಾರೆ. ಈ ಸಂದರ್ಭದಲ್ಲಿ ಹಸು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಚೂರಲ್‌ಮಲಾದಿಂದ ನಾಲ್ಕು ಕಿ.ಮೀ. ದೂರದ ಮೆಪ್ಪಾಡಿಯಲ್ಲಿದ್ದ ಪ್ರವೀದಾ ಈ ಘಟನೆಯ ಬಳಿಕ ತನ್ನ ತಂದೆ ತಾಯಿಯೊಡನೆ ತಾಯಿಯ ಊರಾದ ಚಾಮರಾಜನಗರಕ್ಕೆ ಮರಳಿದ್ದಾರೆ.