ಡೈಲಿ ವಾರ್ತೆ: 01/ ಆಗಸ್ಟ್/2024
ಮೂಡುಬಿದಿರೆ: ಬಾರಿ ಮಳೆಯಿಂದ ಮನೆ ಕುಸಿತ – ಮಹಿಳೆ ಸಾವು
ಮೂಡುಬಿದಿರೆ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮನೆಯೊಂದು ಕುಸಿದು ಬಿದ್ದು ಮಹಿಳೆ ಮೃತಪಟ್ಟ ಘಟನೆ ಜು.31ರ ಬುಧವಾರ ರಾತ್ರಿ ಸುಮಾರು 10 ಗಂಟೆಗೆ ನೆಲ್ಲಿಕಾರು ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆ ಗೋಪಿ (56) ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳ ಸಹಿತ 5 ಮಂದಿಯೊಂದಿಗೆ ವಾಸವಾಗಿರುವ ಗೋಪಿ ಅವರಿಗೆ ತೀವ್ರ ಏಟು ತಗಲಿದ್ದು, ತಕ್ಷಣ ಹೊಸ್ಮಾರು ಆಸ್ಪತ್ರೆಗೆ ಬಳಿಕ ಕಾರ್ಕಳ ಸರಕಾರಿ ಆಸ್ಪತ್ರೆ ಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗದೆ ತಡರಾತ್ರಿ ಮೃತಪಟ್ಟರು.
ಈ ಮಳೆಗಾಲದಲ್ಲಿ ಮಳೆಯಿಂದಾಗಿ ತಾಲೂಕಿನಲ್ಲಿ ಜೀವಹಾನಿ ಸಂಭವಿಸಿರುವ ಮೊದಲ ಪ್ರಕರಣ ಇದಾಗಿದೆ.
ಮುರಕಲ್ಲಿನ ಗೋಡೆ ಕುಸಿದು ಗೋಪಿ ಅವರ ಮೇಲೆಯೇ ಬಿತ್ತೆಂದೂ ಮಕ್ಕಳಾದ ಗಣೇಶ, ರಾಜೇಶ, ಸತೀಶ ಹೊರಗೆ ಓಡಿ ಹೋದ ಕಾರಣ ಪ್ರಾಣಾಪಾಯದಿಂದ ಪಾರಾದರೆಂದೂ ಹೇಳಲಾಗಿದೆ. ಮಕ್ಕಳೆಲ್ಲರೂ ಕೂಲಿ ಕಾರ್ಮಿಕರರಾಗಿದ್ದರೆ.
ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ತಹಶೀಲ್ದಾರ್ ಪ್ರದೀಪ್ ವಿ. ಕುರ್ಡೇಕರ್, ಆರ್ ಐ. ಮಂಜುನಾಥ್, ನೆಲ್ಲಿಕಾರು ಪಂ. ಅಧ್ಯಕ್ಷ ಉದಯ ಪೂಜಾರಿ, ಪಿಡಿಓ ಪ್ರಶಾಂತ ಶೆಟ್ಟಿ, ಕಾರ್ಯದರ್ಶಿ ದಾಮೋದರ, ಸಿಬಂದಿ ಪ್ರಶಾಂತ್ ಜೈನ್, ಲಕ್ಷ್ಮಣ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.