ಡೈಲಿ ವಾರ್ತೆ: 02/ಆಗಸ್ಟ್/2024

ಬಂಟ್ವಾಳ: ನೆರೆ ಪ್ರದೇಶದ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬೇಟಿ

ಬಂಟ್ವಾಳ : ಪಾಕೃತಿಕ ವಿಕೋಪಕ್ಕೆ ತುತ್ತಾಗಿ ಹಾನಿಗೀಡಾದ ಮತ್ತು ನೆರೆಗೆ ನೇತ್ರಾವತಿ ನದಿ ತೀರದ ತಗ್ಗು ಪ್ರದೇಶಗಳು ಜಲಾವೃತಗೊಂಡ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ಬೇಟಿ ನೀಡಿದರು.

 ಮಳೆಗೆ ಗುಡ್ಡ ಜರಿತವಾಗಿರುವ ಗೂಡಿನಬಳಿ , ನೆರೆ ನೀರು ನುಗ್ಗಿ ಸಂತ್ರಸ್ತ ರಾದ ಆಲಡ್ಕ ಮತ್ತು ನಾವೂರ ಭಾಗದ ಜನರ ಸಮಸ್ಯೆ ಆಲಿಸಿದ ಸಚಿವರು ಬಳಿಕ ಮಳೆಗೆ ಕೊಚ್ಚಿಹೋದ ಕಂಚಿಕಾರ್ ಪೇಟೆ ರಸ್ತೆ ಹಾಗೂ ಸರಪಾಡಿ ಭಾಗದಲ್ಲಿ ನಡೆದ ಹಾನಿಗಳ ಬಗ್ಗೆ ವೀಕ್ಷಣೆ ನಡೆಸಿದರು.


ಬಳಿಕ ಪತ್ರಕರ್ತರೊಂದಿಗೆ  ಮಾತನಾಡಿದ ಅವರು ನೆರೆಯಿಂದ ಮಳುಗಡೆಯಾದ ‌‌ಆಲಡ್ಕದದ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯ ಆಗುತ್ತದೆ. ಸಂತ್ರಸ್ತರು ವಾಸವಾಗಿರುವ ಜಾಗದ ಮೇಲೆ ಕುಮ್ಕಿ ಜಾಗವೆಂದು ಕೇಸು ದಾಖಲಾಗಿದ್ದು, ಪ್ರಕರಣ ಜಿಲ್ಲಾಧಿಕಾರಿಯವರ ಮುಂದೆ ಇದೆ, ಆದಷ್ಟು ಬೇಗ ಜಾಗದ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡು ಜಮೀನು ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ತಿಳಿಸಿದ್ದೇನೆ .ಸಮಸ್ಯೆ ಪರಿಹಾರವಾದರೆ ಮನೆ ಕಟ್ಟಲು ಸರಕಾರದ ಸಹಾಯಧನ ನೀಡಲಾಗುತ್ತದೆ ಎಂದರು. 

 ಸಚಿವರು ಆಲಡ್ಕಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ   ಶಾಶ್ವತವಾದ ಪರಿಹಾರಕ್ಕೆ ಒತ್ತಾಯ ಮಾಡಿದ ಇಲ್ಲಿನ ಸಂತ್ರಸ್ತರು ಪ್ರತಿ ವರ್ಷ ನೆರೆಯ ಸಮಸ್ಯೆಯನ್ನು ಅನುಭವಿಸುತ್ತಿದ್ದೇವೆ. ನಮಗೆ ಶಾಶ್ವತವಾದ ಪರಿಹಾರ ಸಿಕ್ಕಿಲ್ಲ. ಬೇರೆ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.

  ಈ ಸಂದರ್ಭದಲ್ಲಿ ಮಾಜಿ‌ ಸಚಿವ ಬಿ.ರಮಾನಾಥ ರೈ, ಮಂಗಳೂರು ಮ.ನ.ಪಾ. ಸದಸ್ಯ ಎ.ಸಿ. ವಿನಯರಾಜ್ , ಪುರಸಭಾ ಸದಸ್ಯ ಅಬುಬಕ್ಕರ್  ಸಿದ್ದೀಕ್ ಗುಡ್ಡೆಯಂಗಡಿ,  ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಹಾಯಕ ಆಯುಕ್ತ ಹರ್ಷವರ್ದನ್, ತಹಶಿಲ್ದಾರ್ ಅರ್ಚನಾ ಭಟ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಸಚಿನ್ ಕುಮಾರ್, ಬಂಟ್ವಾಳ ಪೋಲೀಸ್ ನಿರೀಕ್ಷಕರುಗಳಾದ   ಆನಂತಪದ್ಮನಾಭ, ಶಿವಕುಮಾರ್, ಕಂದಾಯ ನಿರೀಕ್ಷಕರುಗಳಾದ ವಿಜಯ್,ಜನಾರ್ದನ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರಮುಖರಾದ  ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್ ಪಂಜಿಕಲ್ಲು, ಬಾಲಕೃಷ್ಣ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.