ಡೈಲಿ ವಾರ್ತೆ: 08/ಆಗಸ್ಟ್/2024
ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮ ಬಟ್ಟೆ ಕೊಟ್ಟು ಮಾನ ಕಾಪಾಡುವ ದೇವರು ನೇಕಾರರು-ಸಪ್ನ ಮಲ್ಲಿಕಾರ್ಜುನ
ಹರಪನಹಳ್ಳಿ: ಕೈಮಗ್ಗವು ಉದ್ಯೋಗದ ಅತೀ ದೊಡ್ಡ ಕ್ಷೇತ್ರಗಳಲ್ಲಿ ಒಂದಾಗಿದೆ. ಗ್ರಾಮೀಣ ಆರ್ಥಿಕತೆಯಲ್ಲಿ ಹೆಚ್ಚು ಮಹತ್ವದ್ದಾಗಿದೆ. ಮಹಿಳೆಯರಿಗೆ ಅತೀ ಹೆಚ್ಚು ಸಂಖ್ಯೆಯಲ್ಲಿ ಉದ್ಯೋಗ ಕಲ್ಪಿಸಿಕೊಡುತ್ತದೆ ಮತ್ತು ಆರ್ಥಿಕ ಸಬಲೀಕರಣಗೊಳಿಸುತ್ತದೆ. ಕೈಮಗ್ಗ ಉತ್ಪನ್ನಗಳು ನೇರ ಮಾರಾಟದಿಂದ ಆರ್ಥಿಕ ಆದಾಯ ಹೆಚ್ಚಳವಾಗುತ್ತದೆ. ಬಟ್ಟೆ ಕೊಟ್ಟು ನಮ್ಮ ಮಾನ ಕಾಪಾಡುವ ದೇವರು ನೇಕಾರರು ಎಂದು ಹರಪನಹಳ್ಳಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸಪ್ನ ಮಲ್ಲಿಕಾರ್ಜುನ ಅಭಿಪ್ರಾಯ ಪಟ್ಟರು.
ಪಟ್ಟಣದ ಬಸಮ್ಮ ಕಲಾಮಂದಿರದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೈಮಗ್ಗ ದಿನದ ಇತಿಹಾಸವು ಆಗಸ್ಟ್ ೧೯೦೫ ರಲ್ಲಿ ಪ್ರಾರಂಭವಾದ ಸ್ವದೇಶಿ ಚಳುವಳಿಯಿಂದ ಹುಟ್ಟಿಕೊಂಡಿದೆ. ದೇಶೀಯ ಉದ್ಯಮವನ್ನು ಪುನ: ಸ್ಥಾಪಿಸಲು ಮತ್ತು ಬ್ರಿಟಿಷ್ ಸರಕುಗಳ ಆಮದನ್ನು ಕಡಿಮೆ ಮಾಡುವ ಪ್ರಯತ್ನವಾಗಿತ್ತು. ಈ ಆಂದೋಲನವು ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸಲು ಸಹಾಯ ಮಾಡಿತು. 2015 ರಲ್ಲಿ ಆಗಸ್ಟ್ 7 ನ್ನು ರಾಷ್ಟ್ರೀಯ ಕೈಮಗ್ಗ ದಿನವೆಂದು ಘೋಷಿಸಲಾಯಿತು. ಆಧುನಿಕ ಯಂತ್ರೋಪಕರಣಗಳಿಂದಾಗಿ ನೇಕಾರರ ಬದುಕು ಸಂಕಷ್ಟಕ್ಕೀಡಾಗಿದ್ದು, ಎಲ್ಲರೂ ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ಬಳಸುವುದರ ಮೂಲಕ ಭಾರತದ ಸಾಂಪ್ರದಾಯಿಕ ಕೈಮಗ್ಗದ ಉತ್ಪನ್ನಗಳನ್ನ ಖರೀದಿಸಿ ನೇಕಾರರಿಗೆ ಆರ್ಥಿಕ ಬಲ ತುಂಬಬೇಕಾಗಿದೆ ಎಂದರು.
ಬಿಜಿಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಸದಸ್ಯರು ಕೈಮಗ್ಗ ಉತ್ಪನ್ನಗಳನ್ನು ಧರಿಸಿ ಖಾದಿ ಗ್ರಾಮೋದ್ಯೋಗ ಭಂಡಾರಕ್ಕೆ ಭೇಟಿ ನೀಡಿ ಕೈಮಗ್ಗದ ವಿವಿಧ ವಸ್ತುಗಳನ್ನು ಖರೀದಿಸಿದರು. ಕಾರ್ಯಕ್ರಮದ ಸವಿ ನೆನಪಿಗಾಗಿ ಸಸಿ ನೆಡಲಾಯಿತು, ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಗರಾಜ, ಉಪಾಧ್ಯಕ್ಷರಾದ ಉಮಾದೇವಿ, ಜಾನಕಮ್ಮ, ಕಲ್ಪನಾ, ಖಜಾಂಚಿ ಕೆ.ಎಂ. ಕೊಟ್ರಮ್ಮ, ಪದ್ಮಾವತಿ, ಶೀಲಾ, ರೇಣುಕಮ್ಮ, ಮಂಜುಳಾ ಕೆ. ಮಂಜುಳಾ ಮಡಿವಾಳರ ಉಪಸ್ಥಿತರಿದ್ದರು.