ಡೈಲಿ ವಾರ್ತೆ: 11/ಆಗಸ್ಟ್/2024

ನಿಮ್ಮನ್ನು ದೇಶದೊಳಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲ: ಗಡಿಯಲ್ಲಿ ಬಾಂಗ್ಲಾ ನಿರಾಶ್ರಿತರನ್ನು ತಡೆದ ಸೇನೆ

ನವದೆಹಲಿ: ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧತೆಯಿಂದಾಗಿ ದೇಶ ತೊರೆದು ಭಾರತ ಪ್ರವೇಶಿಸಲು ಬಂದಿದ್ದ ಹಿಂದೂಗಳನ್ನು ಭಾರತೀಯ ಸೇನೆಯು ಗಡಿಯಲ್ಲೇ ತಡೆದಿದೆ. ‘ನಿಮ್ಮನ್ನು ಒಳಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲ’ ಎಂದು ನೂರಾರು ಬಾಂಗ್ಲಾ ನಿರಾಶ್ರಿತರಿಗೆ ಸ್ಪಷ್ಟಪಡಿಸಿದೆ.

ಭಾರತದ ಗಡಿಯಲ್ಲಿ ಜಮಾಯಿಸಿರುವ ನೂರಾರು ಬಾಂಗ್ಲಾ ನಿರಾಶ್ರಿತರನ್ನು, ‘ಏಕೆ ಒಳಗೆ ಬಿಡಲು ಸಾಧ್ಯವಿಲ್ಲ’ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ವಿವರಿಸಿ ಹೇಳಿದ್ದಾರೆ. ಮಾಜಿ ಕೇಂದ್ರ ಸಚಿವ ಮತ್ತು ಶಿವಸೇನೆ ನಾಯಕ ಮಿಲಿಂದ್ ದಿಯೋರಾ ಅವರು ವೀಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ಕೂಚ್‌ಬೆಹಾರ್‌ನ ಗಡಿ ಪ್ರದೇಶದಲ್ಲಿ ನಿರಾಶ್ರಿತರ ಗುಂಪಿನೊಂದಿಗೆ ಸೇನಾಧಿಕಾರಿ ಮಾತನಾಡುತ್ತಾ, ನೀವು ಎದುರಿಸುತ್ತಿರುವ ಸಮಸ್ಯೆಗಳು ನಮಗೆಲ್ಲರಿಗೂ ತಿಳಿದಿದೆ. ನೀವು ಇಲ್ಲಿಗೆ ಬಂದಿದ್ದೀರಿ. ಆದರೆ ಚರ್ಚೆಯ ಅಗತ್ಯವಿದೆ. ಈ ರೀತಿಯಲ್ಲಿ ಸಮಸ್ಯೆಯನ್ನು ಪರಿಹರಿಸಲಾಗುವುದಿಲ್ಲ. ನಾವು ಬಯಸಿದರೂ ನಿಮ್ಮನ್ನು ಒಳಗೆ ಬಿಡಲು ಸಾಧ್ಯವಿಲ್ಲ ಎಂದು ತಿಳಿಹೇಳಿದ್ದಾರೆ.

ದಯವಿಟ್ಟು ನನ್ನ ಮಾತು ಕೇಳಿ. ಕೂಗಿದರೆ ಏನೂ ಪ್ರಯೋಜನವಿಲ್ಲ. ನಿಮ್ಮ ಸಮಸ್ಯೆ ಇಡೀ ಜಗತ್ತಿಗೆ ತಿಳಿದಿದೆ. ಆದರೆ ಚರ್ಚೆಯ ಅಗತ್ಯವಿದೆ. ಚರ್ಚೆಯ ನಂತರ, ನಾವು ನಿಮ್ಮನ್ನು ಹೇಗೆ ರಕ್ಷಿಸಬಹುದು ಎಂಬುದನ್ನು ನಾವು ನೋಡುತ್ತೇವೆ. ಹಿರಿಯ ಅಧಿಕಾರಿಗಳು ಇಲ್ಲಿದ್ದಾರೆ. ಆದರೆ ನಾವು ನಿಮಗೆ ತಕ್ಷಣ ಅವಕಾಶ ನೀಡಬೇಕು ಎಂದು ನೀವು ಹೇಳಿದರೆ ಅದು ಸಾಧ್ಯವೇ ಎಂದು ಬಾಂಗ್ಲಾ ನಿರಾಶ್ರಿತರಿಗೆ ಪ್ರಶ್ನಿಸಿದ್ದಾರೆ.
ನನ್ನ ದೇಶದ ಪರವಾಗಿ ನಾನು ನಿಮ್ಮನ್ನು ವಿನಂತಿಸುತ್ತೇನೆ. ನಿಮ್ಮ ಸಮಸ್ಯೆಗಳನ್ನು ಚರ್ಚೆಯ ಮೂಲಕ ಪರಿಹರಿಸಲಾಗುವುದು. ಹಿಂತಿರುಗಲು ನಾವು ನಿಮ್ಮನ್ನು ವಿನಂತಿಸುತ್ತೇವೆ. ಒಂದು ಅಥವಾ ಎರಡು ಗಂಟೆಗಳಲ್ಲಿ ಪರಿಹಾರವನ್ನು ಕಂಡುಹಿಡಿಯಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಅವರು ನಮ್ಮ ಮನೆಗಳನ್ನು ಸುಡುತ್ತಿದ್ದಾರೆ. ನಾವು ದೌರ್ಜನ್ಯ ಎದುರಿಸುತ್ತಿದ್ದೇವೆ ಎಂದು ಬಿಎಸ್‌ಎಫ್‌ ಸಿಬ್ಬಂದಿಗೆ ಜನಸಂದಣಿಯಿಂದ ವ್ಯಕ್ತಿಯೊಬ್ಬ ತಿಳಿಸಿದರು. ನಮ್ಮನ್ನು ಭಾರತದ ಗಡಿಯೊಳಗೆ ಬಿಡಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಯಾಗಿ ಸೇನಾಧಿಕಾರಿ ಮಾತನಾಡಿ, ನಮ್ಮ ವರಿಷ್ಠರು ನಿಮ್ಮ ಪಡೆಯೊಂದಿಗೆ ಚರ್ಚೆ ನಡೆಸಿದ್ದಾರೆ. ಅವರು ನಿಮ್ಮ ಸಮಸ್ಯೆಗಳನ್ನು ಆಲಿಸುತ್ತಾರೆ. ಅವರು ನಿಮ್ಮನ್ನು ಹಿಂತಿರುಗುವಂತೆ ಕೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.