ಡೈಲಿ ವಾರ್ತೆ: 15/ಆಗಸ್ಟ್/2024

‘ಕಾವಡಿ ಹಿರಿಯ ಪ್ರಾಥಮಿಕ ಶಾಲೆಯ ಭಾರತ ರತ್ನ’ ಎಂದೇ ಹೆಸರಾದ ನಿವೃತ್ತ ಶಿಕ್ಷಕರಾದ ಶ್ರೀಯುತ ಶಂಕರ ಮಾಸ್ಟ್ರು ಅನಾರೋಗ್ಯದಿಂದ ನಿಧನ

ಕೋಟ: ಉಡುಪಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾದ ಶ್ರೀಯುತ ಶಂಕರ ಮಾಸ್ಟ್ರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

ತಮ್ಮ ವೃತ್ತಿ ಬದುಕಿನ ಉದ್ದಕ್ಕೂ ಸಂಸ್ಕಾರಯುತ ಬದುಕನ್ನು ನಡೆಸಿ ವಿದ್ಯಾರ್ಥಿಗಳು ಹಾಗೂ ಊರಿನವರ ಪ್ರೀತಿ ವಾತ್ಸಲ್ಯದ ಚಿಲುಮೆಯಾಗಿ ಎಲ್ಲರ ಮೆಚ್ಚಿನ ‘ಶಂಕರ್ ಮಾಸ್ಟ್ರು ‘ಎಂದೇ ಚಿರಪರಿಚಿತರಾಗಿರುವ ಇವರು ಬಡ ವಿದ್ಯಾರ್ಥಿಯ ಪಾಲಿನ ಆಶಾಕಿರಣ ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಶಿಕ್ಷಕರಾಗಿ , ಮುತ್ತು ಫೋಣಿಸಿದ ಅಂದವಾದ ಕೈ ಬರಹದೊಂದಿಗೆ ಕರ್ತವ್ಯ ನಿಷ್ಠೆಗೆ ಹೆಸರಾಗಿದ್ದರಲ್ಲದೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ರಜಾ ಅವಧಿಯಲ್ಲಿ ವಿಶೇಷ ತರಗತಿ ನಡೆಸಿ ಎಲ್ಲರಿಗಿಂತ ವಿಭಿನ್ನ ಎನಿಸಿದ್ದರು.

ಸೇವಾ ಅವಧಿಯಲ್ಲಿರುವಾಗ ಪ್ರತಿ ವರ್ಷವೂ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕರಿ ಹಲಗೆಯ ಮೇಲೆ ವರ್ಣ ರಂಜಿತ ಭಾರತ ಭೂಪಟದ ಚಿತ್ರ ಬಿಡಿಸಿ ವಿದ್ಯಾರ್ಥಿಗಳ ಪಾಲಿನ ‘ಭಾರತ ರತ್ನ’ವಾಗಿದ್ದರು ಎಂದು ಅವರನ್ನು ಕಾವಡಿ ಶಾಲಾ ಶತಮಾನೋತ್ಸವ ವೇಳೆ ಸನ್ಮಾನಿಸುವ ಸಂಧರ್ಭದಲ್ಲಿ ಹಳೆ ವಿದ್ಯಾರ್ಥಿಯಾದ ಯೋಗೇಶ್ ಶೆಟ್ಟಿಯವರು ಹೆಮ್ಮೆಯಿಂದ ಹೇಳಿದ್ದನ್ನು ನಾವಿಂದು ನೆನಪಿಸಿ ಕೊಳ್ಳಬಹುದಾಗಿದೆ. ಅವರ ಅಗಾಧವಾದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ಹಳೆ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು. ಶ್ರೀಯುತರು ಗುಡಿಬೆಟ್ಟು, ಎಡ ಮೊಗೆ, ಕಮಲಶಿಲೆ ,ಅಂಕದಕಟ್ಟೆ ಹಾಗೂ ಕಾವಡಿ ಶಾಲೆ ಮೊದಲಾದ ಕಡೆಗಳಲ್ಲಿ ಸೇವೆ ಸಲ್ಲಿಸಿ ಕರ್ತವ್ಯ ನಿಷ್ಠೆಗೆ ಹೆಸರುವಾಸಿಯಾಗಿದ್ದರು.
ಇತ್ತೀಚಿಗೆ ಅನಾರೋಗ್ಯದಿಂದಾಗಿ ಅಕಾಲಿಕ ಮರಣ ಹೊಂದಿದ್ದು ಪತ್ನಿ ಹಾಗೂ ಇಬ್ಬರು ಪುತ್ರ , ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ವಿಧ್ಯಾಭಿಮಾನಿಗಳನ್ನು ಬಂಧು ಮಿತ್ರರನ್ನು ಅಗಲಿದ್ದಾರೆ.