ಡೈಲಿ ವಾರ್ತೆ: 17/ಆಗಸ್ಟ್/2024

ಮನೆ ಮುಂದೆ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ಟಿಪ್ಪರ್ ಹರಿದು ಸ್ಥಳದಲ್ಲೇ ದಾರುಣ ಸಾವು!

ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ಟಿಪ್ಪರ್ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನ ಮೈಸೂರು ರಸ್ತೆ ಗುಡ್ಡದಹಳ್ಳಿ ಸಮೀಪ ನಡೆದಿದೆ.

ಟಿಪ್ಪರ್‌ ಚಾಲಕನೊಬ್ಬ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿಕೊಂಡು ಬಂದು ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ಮೇಲೆ ಕುಳಿತು ಆಟವಾಡುತ್ತಿದ್ದ ಮಕ್ಕಳ ಮೇಲೆ ಯಮನಂತೆ ಬಂದ ಟಿಪ್ಪರ್‌ ಇವರನ್ನು ನೆಲಕ್ಕೆ ಕೆಡವಿದೆ.

ಇಬ್ಬರು ಮಕ್ಕಳ ಮೇಲೆ ಟಿಪ್ಪರ್ ಹರಿದ ಪರಿಣಾಮ ಮಕ್ಕಳು ನಜ್ಜುಗುಜ್ಜಾಗಿದ್ದಾರೆ. ನಿಯಂತ್ರಣಕ್ಕೆ ಸಿಗದ ಟಿಪ್ಪರ್‌ ಐದಾರು ವಾಹನಗಳ ಮೇಲೆ ಹರಿದಿದೆ.

ಹಾಲೋಬಾಕ್ಸ್ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ನಜ್ಜಗುಜ್ಜಾಗಿರುವ ಮಕ್ಕಳ ಶವಗಳನ್ನು ಆಂಬ್ಯುಲೆನ್ಸ್‌ಗೆ ಹಾಕಿ ಒಯ್ಯಲಾಗಿದೆ. ಅಪಘಾತದ ದಾರುಣತೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ನಿನ್ನೆಯಷ್ಟೇ ವರಮಹಾಲಕ್ಷ್ಮಿ ಹಬ್ಬದಲ್ಲಿ ಹೊಸ ಬಟ್ಟೆ ತೊಟ್ಟು ಕುಣಿದಾಡಿದ್ದ ಮಕ್ಕಳು ಇಂದು ಶವವಾಗಿದ್ದು, ಇವರ ಕುಟುಂಬಗಳು ಶೋಕದ ಮಡುವಿನಲ್ಲಿವೆ.