ಡೈಲಿ ವಾರ್ತೆ: 18/ಆಗಸ್ಟ್/2024

ಹನಿ, ಹನಿ ಕೂಡಿಟ್ಟ ನಿಧಿಯಿಂದ ಬಡ ಮಹಿಳೆಗೆ ಮನೆ ಕಟ್ಟಲು ದೇಣಿಗೆ ನೀಡಿದ ಕೂಲಿಕಾರ್ಮಿಕ!

ಕೋಟ: ಇನ್ನೊಬ್ಬರ ಕಷ್ಟಕ್ಕೆ ಮರುಗುವ, ಕೈಲಾದ ಸಹಾಯ ಮಾಡುವ ದೊಡ್ಡಗುಣ ಉಳ್ಳವರೇ ನಿಜವಾಗಿಯೂ ಮಹಾತ್ಮರು. ಇಲ್ಲಿ ಹೇಳಬಯಸುವುದು ಗ್ರಾಮೀಣ ಪ್ರದೇಶದ ಅಂತಹ ಓರ್ವ ವಿಶಾಲ ಹೃದಯಿ ವ್ಯಕ್ತಿಯ ಬಗ್ಗೆ. ಅವರೇ, ಕೋಟ ಸಮೀಪದ ಹರ್ತಟ್ಟು ನಿವಾಸಿ, ಬಡ ಕೂಲಿಕಾರ್ಮಿಕ ಮಂಜುನಾಥ ಪೂಜಾರಿ.

ಇವರು ಈ ಪ್ರದೇಶದ ದಿನಗೂಲಿ ಕಾರ್ಮಿಕ. ತೀರಾ ಸಣ್ಣ ಆದಾಯವಿದ್ದರೂ ಇವರ ಹೃದಯ ವೈಶಾಲ್ಯತೆಯಿಂದಲೇ ಇಂದು ಇಲ್ಲಿ ಸುದ್ದಿಗೆ ಕಾರಣರಾಗಿದ್ದಾರೆ. ದೈನಂದಿನ ಕೂಲಿ ಕೆಲಸದ ಜೊತೆಗೆ ಮಂಜುನಾಥ ಹರ್ತಟ್ಟುವಿನ ಶ್ರೀ ಶಿರಸಿ ಅಮ್ಮನವರ ದೇವಾಲಯದಲ್ಲಿ ಅರ್ಚಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ದಿನಗೂಲಿ ಕೆಲಸದಲ್ಲಿ ಸಿಗುವ ಸಣ್ಣ ಆದಾಯದಲ್ಲೇ ದಿನವೂ ನೂರು, ಐವತ್ತು ರೂಪಾಯಿ ತೆಗೆದಿರಿಸಿ, ಆ ಮೊತ್ತವನ್ನು ದಾನ – ಧರ್ಮಾದಿಗಳಿಗೆ ಬಳಸುವ ಹವ್ಯಾಸ ಇವರದು.

ಕೋಟ ಸಮೀಪದ ಹಾಡಿಕೆರೆ ಬೆಟ್ಟು ನಿವಾಸಿ ಬಾಬಿ ಮಡಿವಾಳ್ತಿ ಎಂಬ ಬಡ ಮಹಿಳೆ ಮೂರು ವರ್ಷಗಳ ಹಿಂದೆ ಮನೆ ಕಟ್ಟುವಾಗ ಮಂಜುನಾಥ ಪೂಜಾರಿಯಲ್ಲಿ ಏನಾದರೂ ಸಹಾಯ ಮಾಡುವಂತೆ ವಿನಂತಿಸಿದ್ದರು. ಅದಕ್ಕಾಗಿ ಪೂಜಾರಿ ಪ್ರತಿದಿನದ ತನ್ನ ಆದಾಯದಲ್ಲಿ ಕೂಡಿಟ್ಟ ಒಟ್ಟು ಹತ್ತು ಸಾವಿರ ರೂಪಾಯಿಗಳನ್ನು ಬಾಬಿ ಮಡಿವಾಳ್ತಿಗೆ ನೀಡಿದ್ದಾರೆ. ಮನೆ ಕಟ್ಟುವುದೆಂದರೆ ಲಕ್ಷಾಂತರ ರೂಪಾಯಿ ಕಾರ್ಯ. ಆದರೂ ಇಂತಲ್ಲಿ ಒದಗಿಬರುವ ಸಣ್ಣ ಮೊತ್ತದ ಸಹಾಯವಾದರೂ ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ಬಾಬಿಯವರ ಪತಿ ಮತ್ತು ತಂಗಿ ವಿಶೇಷ ಚೇತನರು. ಇಬ್ಬರು ಮಕ್ಕಳು ಓದುತ್ತಿದ್ದಾರೆ. ಈಕೆ ಕೂಲಿ ಕೆಲಸ ಮಾಡುತ್ತಾ, ಸಾಲ, ದಾನಿಗಳ ನೆರವಿನಿಂದ ಸ್ವಂತ ಸೂರು ಹೊಂದುವ ಕನಸನ್ನು ನನಸಾಗಿಸಲು ಶ್ರಮಿಸುತ್ತಿದ್ದಾರೆ. ಹಾಗೆಯೇ, ಮಂಜುನಾಥ ಪೂಜಾರಿಯವರ ಸಕಾಲದ ನೆರವು ಬಾಬಿ ಮಡಿವಾಳ್ತಿ ಕೆಲಸದಲ್ಲಿ ಹೊಸ ಶಕ್ತಿ ತುಂಬಿದೆ. ಕೋಟ ಪಂಚಾಯತ್ ಮಾಜಿ ಅಧ್ಯಕ್ಷ ಅಜಿತ್ ದೇವಾಡಿಗ, ಹಾಲಿ ಉಪಾಧ್ಯಕ್ಷ ಪಾಂಡು ಪೂಜಾರಿ ಹಾಗೂ ಇನ್ನಿತರ ಸಹೃದಯರು ಬಾಬಿ ಮಡಿವಾಳ್ತಿಯ ಮನೆ ನಿರ್ಮಾಣ ಕಾರ್ಯಕ್ಕೆ ಸಹಾಯ ಒದಗಿಸಿದ್ದಾರೆ.

ಸಾಕಷ್ಟು ಧನಿಕರೂ ಕೂಡಾ ನಿಜವಾಗಿ ಸಹಾಯದ ಅವಶ್ಯಕತೆಯಿರುವಲ್ಲಿ ಸ್ಪಂದಿಸದೆ ಕೇವಲ ಹೆಸರಿಗಾಗಿ ದಾನ – ಧರ್ಮದ ಸೋಗಿನಲ್ಲಿ ಮೈಲೇಜು ಪಡೆಯುವ ಈ ದಿನಗಳಲ್ಲಿ ಮಂಜುನಾಥ ಪೂಜಾರಿಯ ಕಾರ್ಯ ಗಮನ ಸೆಳೆಯುತ್ತದೆ. ಇವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿದ ಕೋಟ ಗ್ರಾಮ ಪಂಚಾಯತ್ ಹಾಗೂ ಇನ್ನಿತರ ಸಂಘ – ಸಂಸ್ಥೆಗಳು ಮಂಜುನಾಥ ಪೂಜಾರಿಯವರನ್ನು ಸಮ್ಮಾನಿಸಿವೆ. ಈ ಗುರುತಿಸುವಿಕೆ ಪೂಜಾರಿಯವರಿಗೆ ಇನ್ನಷ್ಟು ಹುರುಪು ತುಂಬಿವೆ. ಇವರಿಂದ ಇನ್ನಷ್ಟು ಸಹಾಯ ಕಾರ್ಯಗಳು ಆಗಲಿ ಎಂಬುದೇ ನಮ್ಮ ಹಾರೈಕೆ.