ಡೈಲಿ ವಾರ್ತೆ: 22/ಆಗಸ್ಟ್/2024
ಬ್ರಹ್ಮಾವರ : ಅನಾಥ ಹಾಗೂ ಬುದ್ದಿಮಾಂದ್ಯ ಮಕ್ಕಳಿಗೆ ಮತ್ತು ಹಿರಿಯರಿಗೆ ಚಾದರ ಹಾಗೂ ಸಿಹಿ ತಿಂಡಿ ವಿತರಣೆ
ಬ್ರಹ್ಮಾವರ:ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೊ. ಆಪರೇಟಿವ್ ಕಲ್ಯಾಣಪುರ ಶಾಖೆ ವತಿಯಿಂದ ಬ್ರಹ್ಮಾವರ ಅಪ್ಪ ಅಮ್ಮ ಅನಾಥಲಾಯದ ಅನಾಥ ಹಾಗೂ ಬುದ್ದಿಮಾಂದ್ಯ ಮಕ್ಕಳಿಗೆ ಮತ್ತು ಹಿರಿಯರಿಗೆ ಸೋಲಾಪುರ ಚಾದರ ಹಾಗೂ ಸಿಹಿ ತಿಂಡಿ ವಿತರಣೆ ಕಾರ್ಯಕ್ರಮವು ಆ. 21 ರಂದು ಬುಧವಾರ ಸಂಜೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮ ಬೈದರ್ಕಳ ದೇವಸ್ಥಾನದ ಅಧ್ಯಕ್ಷರು, ಶ್ರೀಕ್ಷೇತ್ರ ಕಳಿಬೈಲುನ ಆಡಳಿತ ಮೊಕ್ತೇಸರರಾದ ಎಂ. ಸಿ. ಚಂದ್ರಶೇಖರ ವಹಿಸಿದ್ದರು.
ಮುಖ್ಯಅತಿಥಿಗಳಾದ ಸಮಾಜ ಸೇವಕ ಹಾಗೂ ಉದ್ಯಮಿಯಾದ ಜೋಸೆಫ್ ರೆಬಲ್ಲೋ ಉಡುಪಿ ಇವರು ಮಾತನಾಡಿ, ಮಕ್ಕಳು ಮುಂದೆ ಬೆಳೆದು ದೊಡ್ಡವರಾದಾಗ ಸಮಾಜ ಅವರನ್ನು ಒಳ್ಳೆಯ ಭಾವನೆಯಿಂದ ನೋಡಿ ಗೌರವಿಸುವಂತೆ ತಂದೆ ತಾಯಿಗಳು ಮಕ್ಕಳನ್ನು ಬೆಳೆಸಬೇಕು. ಮಕ್ಕಳಿಗೆ ಮುಂದಿನ ಜೀವನದ ಅರಿವು ಮೂಡಿಸುವದಕ್ಕಾಗಿ ಏಳವೆಯಲ್ಲೇ ಅವರು ಕಷ್ಟದ ಅರಿವು ಪಡೆಯುವಂತಿರಬೇಕು . ಹೀಗಾದರೆ, ಮುಂದೆ ಅವರು ತಾವು ದುಡಿದ ಹಣವನ್ನು ಹಾಳು ಮಾಡದೆ ಉತ್ತಮ ಹಾದಿಯಲ್ಲಿ ಬೆಳೆಯುತ್ತಾರೆ. ತಮಗಾಗಿ ತಮ್ಮ ಹೆತ್ತವರು ಅನುಭವಿಸಿದ ಕಷ್ಟಗಳ ಅರಿವು ಅವರಿಗಿದ್ದರೆ ತಂದೆತಾಯಿಗಳನ್ನು ಮನೆಯಿಂದ ಹೊರಗೆ ಹಾಕದೆ ಪ್ರೀತಿ, ಗೌರವದಿಂದ ನೋಡಿಕೊಳ್ಳುತ್ತಾರೆ ಎನ್ನವುದರ ಬಗ್ಗೆ ಉದಾಹರಣೆ ಮೂಲಕ ವಿವರಿಸಿದರು.
ತಂದೆ ತಾಯಿ ಅನಾಥಾಶ್ರಮಕ್ಕೆ ಬರಲು ಕಾರಣ ಮಕ್ಕಳ ಮೇಲಿರುವ ಅಪಾರವಾದ ಕುರುಡು ಪ್ರೀತಿಯೇ ಕಾರಣವಾಗುತ್ತದೆ ಎಂದೂ ಅವರು ಎಚ್ಚರಿಸಿದರು.
ತಂದೆತಾಯಿಯ ಅತಿಯಾದ ಪ್ರೀತಿ, ಶ್ರೀಮಂತಿಕೆಯಿಂದ ಮಕ್ಕಳು ಕೇಳಿದ ಬೇಕು – ಬೇಡವಾದುದನ್ನು ಕೊಟ್ಟು ಮುಂದೆ ನಮ್ಮ ನಿಯಂತ್ರಣದಿಂದ ತಪ್ಪಿ ಹೋಗುತ್ತಾರೆ. ನಮ್ಮ ಶ್ರೀಮಂತಿಕೆ ಜಾಸ್ತಿಯಾದಾಗ ನಮ್ಮ ಬುದ್ದಿವಂತಿಕೆ ಕಡಿಮೆ ಆಗುತ್ತೆ. ಮಕ್ಕಳು ಕಷ್ಟವರಿಯದ ಶ್ರೀವಂತಿಕೆಯಿಂದ ತಂದೆತಾಯಿಯನ್ನು ಹೊರಗೆ ಹಾಕುವ ಸಂದರ್ಭಗಳು ಇದೆ.
‘ಮುಂದೆ ಯಾರು ಬಿಟ್ಟರೂ ನಾನು ಬಿಡುವುದಿಲ್ಲ’ ಎನ್ನುವ ಮಾತಿನಂತೆ ಅನಾಥರಾಗಿ ಬಂದವರನ್ನು ಈ ಅಪ್ಪ- ಅಮ್ಮ ಅನಾಥಾಲಯದ ಪ್ರಶಾಂತ್ ಪೂಜಾರಿ ಅವರು ಬಿಟ್ಟು ಹಾಕುವುದಿಲ್ಲ. ಆಶ್ರಯ ಬಯಸಿ ಬಂದ ಅನಾಥರಿಗೆ ಇವರ ತಂಪಿನ ನೆರಳು ಸದಾ ಇದ್ದೇ ಇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಇಬ್ರಾಹಿಂ ಕೋಟ ಹಾಗೂ ರವೀಂದ್ರ ಕೋಟ, ಬ್ರಹ್ಮಾವರ ಶಾಖೆಯ ವ್ಯವಸ್ಥಾಪಕರಾದ ಅಭಿಷೇಕ್ ಆಚಾರ್, ಅಪ್ಪ – ಅಮ್ಮ ಅನಾಥಲಯದ ಟ್ರಸ್ಟಿ ಪ್ರಶಾಂತ್ ಪೂಜಾರಿ,
ರೋಹಿತ್ ಮೊಗೇರ ಅಭಿವೃದ್ಧಿ ಅಧಿಕಾರಿ, ನಿರ್ದೇಶಕರು
ಮೈಕೆಲ್ ಡಿ’ಸೋಜ ಹಾಗೂ ಮಿಲಾಗ್ರಿಸ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಾಖಾ ವ್ಯವಸ್ಥಾಪಕರಾದ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿ, ಮನಿಷಾ ಡಿ’ಸೋಜ ವಂದಿಸಿದರು. ನಾಗರಾಜ್ ಪಾಂಡೇಶ್ವರ ನಿರೂಪಿಸಿದರು.