ಡೈಲಿ ವಾರ್ತೆ: 22/ಆಗಸ್ಟ್/2024
ಬಂಟ್ವಾಳ: ಪುರಸಭಾ ನೂತನ ಅಧ್ಯಕ್ಷ ಕಾಂಗ್ರೆಸ್ ಪಕ್ಷದ ವಾಸು ಪೂಜಾರಿ ಲೊರೆಟ್ಟೋ ಹಾಗೂ ಉಪಾಧ್ಯಕ್ಷ ಎಸ್ಡಿಪಿಐ ಪಕ್ಷದ ಮೂನಿಸ್ ಆಲಿ ಆಯ್ಕೆ
ಬಂಟ್ವಾಳ : ಬಂಟ್ವಾಳ ಪುರಸಭಾ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ವಾಸು ಪೂಜಾರಿ ಲೊರೆಟ್ಟೋ ಹಾಗೂ ಉಪಾಧ್ಯಕ್ಷರಾಗಿ ಎಸ್ಡಿಪಿಐ ಪಕ್ಷದ ಮೂನಿಸ್ ಆಲಿ ಅವರು ಆಯ್ಕೆಯಾಗಿದ್ದಾರೆ.
ಬಂಟ್ವಾಳ ಪುರಸಭೆಯ ಎರಡನೇ ಅವಧಿಗೆ ನಡೆದ ಅದ್ಯಕ್ಷ, ಉಪಾಧ್ಯಕ್ಷ ರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಈ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.
ಕಳೆದ ಬಾರಿ ಎಸ್ಡಿಪಿಐ ಪಕ್ಷದ ಸದಸ್ಯರು ಕಾಂಗ್ರೆಸ್ ಗೆ ಬೇಷರತ್ ಬೆಂಬಲ ನೀಡಿದ್ದರು ಹಾಗಾಗಿ ಬಂಟ್ವಾಳ ಪುರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಅಲಂಕರಿಸಿತ್ತು. ಇದೀಗ ಕಾಂಗ್ರೆಸ್ ಹಾಗೂ ಎಸ್ಡಿಪಿಐ ಮತ್ತೊಮ್ಮೆ ಮೈತ್ರಿ ಮಾಡಿಕೊಂಡು ಹುದ್ದೆಯನ್ನು ಹಂಚಿಕೊಂಡಿದೆ.
ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ನಾಮಪತ್ರ ಸಲ್ಲಿಕೆಯಾಗಿದ್ದು, ಎಸ್ಡಿಪಿಐ ಹಾಗೂ ಬಿಜೆಪಿ ಪಕ್ಷದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಎಸ್ಡಿಪಿಐ ಯು ಇದ್ರಿಸ್ ಅವರು ಅಧ್ಯಕ್ಷ ಸ್ಥಾನದ ನಾಮಪತ್ರ ಹಿಂದೆಗೆದುಕೊಂಡಿದ್ದಾರೆ.
ಅದ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ವಾಸು ಪೂಜಾರಿ, ಬಿಜೆಪಿಯಿಂದ ಎ.ಗೋವಿಂದ ಪ್ರಭು, ಉಪಾಧ್ಯಕ್ಷ ಸ್ಥಾನಕ್ಕೆ ಎಸ್ಡಿಪಿಐ ಯಿಂದ ಮೂನಿಷ್ ಅಲಿ, ಬಿಜೆಪಿಯಿಂದ ಹರಿಪ್ರಸಾದ್ ಭಂಡಾರಿಬೆಟ್ಟು ಅವರು ನಾಮಪತ್ರ ಸಲ್ಲಿಸಿದ್ದರು.
ಕಾಂಗ್ರೆಸ್ ಮತ್ತು ಎಸ್ಡಿಪಿಐ ಮೈತ್ರಿಯ ಹಿನ್ನೆಲೆಯಲ್ಲಿ ಒಟ್ಟು 15 ಮತಗಳು ಗಳಿಸಿಕೊಂಡರೆ, ಬಿಜೆಪಿಯು ಶಾಸಕರು ಮತ್ತು ಸಂಸದರ ಮತ ಸೇರಿ ಒಟ್ಟು 13 ಮತಗಳು ಪಡೆದುಕೊಂಡಿದೆ.
ಬಂಟ್ವಾಳ ಪುರಸಭೆಯಲ್ಲಿ ಈ ಬಾರಿ ಕಾಂಗ್ರೆಸ್ ಎಸ್ಡಿಪಿಐ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸಲಿದೆ.