ಡೈಲಿ ವಾರ್ತೆ: 10/Sep/2024
ಬೋನ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ 10 ವರ್ಷದ ಬಾಲಕನಿಗೆ ಅಪ್ಪು ಅಟ್ಯಾಕರ್ಸ್ ಮಣೂರು ತಂಡದಿಂದ ವೇಷ ತೊಟ್ಟು ದೇಣಿಗೆ ಸಂಗ್ರಹಿಸಿ ಸಹಾಯ ಹಸ್ತ
ಕೋಟ: ಬ್ರಹ್ಮಾವರ ತಾಲೂಕು ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾರಿಕೆರೆ ನಿವಾಸಿಗಳಾದ ಶ್ರೀಮತಿ ಆಶಾ ಮತ್ತು ಶ್ರೀ ರಾಘವೇಂದ್ರ ಗಾಣಿಗ ದಂಪತಿಯ ಪುತ್ರ ಕೃತಿಕ್ ಗಾಣಿಗ (10) ಈ ಪುಟ್ಟ ಬಾಲಕ ಮೂಳೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು.
ಅವನ ಚಿಕಿತ್ಸೆಗೆ ಸುಮಾರು 25 ಲಕ್ಷ ರೂ. ಬೇಕಾಗಬಹುದು ಎಂದು ಪರಿಣತ ಡಾಕ್ಟರರು ತಿಳಿಸಿದ್ದಾರೆ.
ಇಷ್ಟೊಂದು ದೊಡ್ಡ ಮೊತ್ತದ ಹಣ ಹೊಂದಿಸಲಾಗದೆ ಪರದಾಡುತ್ತಿದ್ದ ಕುಟುಂಬಕ್ಕೆ ಅಪ್ಪು ಅಟ್ಯಾಕರ್ಸ್ ಮಣೂರು ವಾಲಿಬಾಲ್ ತಂಡವು ಕೇವಲ ಆಟಕ್ಕೆ ಸೀಮಿತವಾಗದೆ ತಮ್ಮಿಂದಾಗಿ ಈ ಬೆಳೆಯುವ ಪುಟ್ಟ ಬಾಲಕನ ಚಿಕಿತ್ಸೆಗೆ ನೆರವಾಗಬೇಕೆನ್ನುವ ಪಣತೊಟ್ಟು ಗಣೇಶ ಚತುರ್ಥಿಯ ದಿನದಂದು ಶ್ರೀ ಆನೆಗುಡ್ಡೆ ದೇವಸ್ಥಾನ, ಕೊಳಲು ಕಲ್ಲು ದೇವಸ್ಥಾನ, ಗುಡ್ಡಟ್ಟು ವಿನಾಯಕ ದೇವಸ್ಥಾನ ಹಾಗೂ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನಗಳಲ್ಲಿ ವೇಷ ತೊಟ್ಟು ದೇಣಿಗೆ ಸಂಗ್ರಹಿಸಿದರು.
ಆ ಸಂಗ್ರಹಿಸಿದ 35,261 ರೂಪಾಯಿಯನ್ನು ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಸತೀಶ್ ಹೆಚ್ ಕುಂದರ್ ಅವರ ಮುಖಾಂತರ ಪುಟ್ಟ ಬಾಲಕ ಕೃತಿಕ್ ಗಾಣಿಗ ಅವರ ಕುಟುಂಬಕ್ಕೆ ಹಸ್ತಾಂತರಿಸಿದರು.