ಡೈಲಿ ವಾರ್ತೆ: 11/Sep/2024
ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲ್ಲಡ್ಕ ವಲಯ ಮಟ್ಟದ ಪ್ರೌಢಶಾಲಾ ಕಬಡ್ಡಿ ಪಂದ್ಯಾಟ
ಬಂಟ್ವಾಳ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ ಪೆರಾಜೆ ಇವರ ಜಂಟಿ ಸಹಯೋಗದೊಂದಿಗೆ ಕಲ್ಲಡ್ಕ ವಲಯ ಮಟ್ಟದ ಪ್ರೌಢಶಾಲಾ ಬಾಲಕ – ಬಾಲಕಿಯರ ಕಬಡ್ಡಿ ಪಂದ್ಯಾಟವು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷ ಪ್ರಹ್ಲಾದ್ ಶೆಟ್ಟಿ ಮಾತನಾಡಿ, “ ವ್ಯಕ್ತಿಯು ಸದೃಢವಾಗಲು ಸೇವಿಸುವ ಆಹಾರದೊಂದಿಗೆ ನಿತ್ಯ ಚಟುವಟಿಕೆಗಳು ಕೂಡ ಶಿಸ್ತು ಬದ್ಧವಾಗಿರಬೇಕು. ನಮ್ಮ ದೇಹಕ್ಕೆ ಸರಿಯಾದ ವ್ಯಾಯಾಮ ಹಾಗೂ ನಿರಂತರ ಚಟುವಟಿಕೆಗಳಿದ್ದಾಗ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಇಂದಿನ ಈ ಕ್ರೀಡಾಕೂಟವು ಯಶಸ್ವಿಯಾಗಲು ಶಿಕ್ಷಕರ ಹಾಗೂ ಕ್ರೀಡಾಪಟುಗಳ ಪಾತ್ರ ಅತಿ ಮುಖ್ಯ” ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಶಂಕರ ವಿ ಕಲ್ಲಡ್ಕ ಮಾತನಾಡಿ, “ಕ್ರೀಡೆ ಎಂಬುದು ಮನುಷ್ಯನ ಬಾಲ್ಯದಿಂದ ಅಂತ್ಯದವರೆಗೆ ಇರುವಂತಹ ಒಂದು ಚಟುವಟಿಕೆ. ನನ್ನ ವಿದ್ಯಾರ್ಥಿ ಜೀವನದಲ್ಲಿ ಆರಂಭವಾದ ವ್ಯಾಯಾಮ ಹಾಗೂ ಕ್ರೀಡಾ ಅಭ್ಯಾಸ ಇಂದಿಗೂ ಮುಂದುವರಿಯುತ್ತಿದೆ. ವಿದ್ಯಾರ್ಥಿಗಳೆಲ್ಲರು ವಿದ್ಯೆಯೊಂದಿಗೆ ಆಟಗಳಲ್ಲಿ ಕೂಡ ತೊಡಗಿಸಿಕೊಂಡು ದಿನಕ್ಕೆ ಒಂದು ಗಂಟೆಯಾದರೂ ವ್ಯಾಯಾಮ ಅಥವಾ ಕ್ರೀಡೆಗೆ ಮೀಸಲಿಡಬೇಕು. ಹಾಗಿದ್ದಲ್ಲಿ ಮಾತ್ರ ತಾವು ವೃತ್ತಿ ಜೀವನದಲ್ಲೂ, ನಿವೃತ್ತಿಯಲ್ಲೂ ಆರೋಗ್ಯದಿಂದಿರಲು ಸಾಧ್ಯ. ಸೋಲು – ಗೆಲುವು ಎಂಬುದು ಸ್ವಾಭಾವಿಕ. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವಿರಬೇಕು. ಕ್ರೀಡೆಯಲ್ಲಿ ಸೋತವರು ಸೋಲಿನ ಬಗ್ಗೆ ಅರಿತು ಛಲವನ್ನು ಬಿಡದೆ ಮುಂದುವರಿಯಬೇಕು. ದೃಢಛಲ ಹಾಗೂ ಅವಿರತ ಪರಿಶ್ರಮವಿದ್ದರೆ ಖಂಡಿತ ಗುರಿ ಮುಟ್ಟಲು ಸಾಧ್ಯ. ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಜಗದೀಶ್ ಬಾಳ್ತಿಲ, ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬಂಟ್ವಾಳ ಇದರ ಅಧ್ಯಕ್ಷ ಇಂದುಶೇಖರ್, ಸಂಸ್ಥೆಯ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ, ಸಂಸ್ಥೆಯ ಮುಖ್ಯ ಶಿಕ್ಷಕಿ ಸುಪ್ರಿಯಾ ಡಿ ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದ ಬಾಲಕರ ಹಾಗೂ ಬಾಲಕಿಯರ ತಂಡಗಳು ಪ್ರಥಮ ಸ್ಥಾನ ಪಡೆದಿದ್ದು, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಬಾಲಕರ ಹಾಗೂ ಬಾಲಕಿಯರ ತಂಡಗಳು ದ್ವಿತೀಯ ಸ್ಥಾನ ಪಡೆದು 4 ತಂಡಗಳು ಕೂಡ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತವೆ. ಒಟ್ಟು 7 ಬಾಲಕರ ತಂಡಗಳು ಹಾಗೂ 4 ಬಾಲಕಿಯರ ತಂಡಗಳು ಭಾಗವಹಿಸಿದ್ದವು.
ಬಾಲಕರ ವಿಭಾಗದಲ್ಲಿ
ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಭವಿತ್ ಕುಮಾರ್, ಪ್ರಣಮ್, ತನ್ವಿ, ಮೇಘಶ್ರೀ, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಶುಭಂ ಶೆಟ್ಟಿ, ಚಿನ್ಮಯಿ ಇವರು ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು.
ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ದಿನಕರ್ ಪೂಜಾರಿ ಸ್ವಾಗತಿಸಿ, ವಿಶಾಲಾಕ್ಷಿ ಎಚ್ ಆಳ್ವ ವಂದಿಸಿದರು. ಸಹ ಶಿಕ್ಷಕಿಯರಾದ ಲೀಲಾ ಹಾಗೂ ಅಶ್ವಿನಿ ಪಿ.ಆರ್ ಕಾರ್ಯಕ್ರಮ ನಿರೂಪಿಸಿದರು.