ಡೈಲಿ ವಾರ್ತೆ: 11/Sep/2024

ಮಂಗಳೂರು: ಹಂಪನಕಟ್ಟೆ ಬಸ್‌ ತಂಗುದಾಣ ತೆರವು ಖಂಡಿಸಿ ಎಬಿವಿಪಿ ಪ್ರತಿಭಟನೆ- ಲಘು ಲಾಠಿಪ್ರಹಾರ

ಮಂಗಳೂರು: ಮಂಗಳೂರಿನ ಹಂಪನಕಟ್ಟೆ ಬಳಿ ಇದ್ದಂತಹ ಪ್ರಯಾಣಿಕರ ಬಸ್‌ ತಂಗುದಾಣವನ್ನು ಪಾಲಿಕೆ ಇತ್ತೀಚೆಗೆ ತೆರವು ಮಾಡಿದ್ದು, ಇದನ್ನು ಖಂಡಿಸಿ ಮತ್ತು ಮತ್ತೆ ಅದೇ ಜಾಗದಲ್ಲಿ ಬಸ್‌ ತಂಗುದಾಣ ನಿರ್ಮಿಸಬೇಕು ಎಂದು ಆಗ್ರಹಿಸಿ ಎಬಿವಿಪಿಯಿಂದ ಬುಧವಾರ ಕ್ಲಾಕ್ ಟವರ್ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು ಏಕಾಏಕಿ ರಸ್ತೆಗೆ ನುಗ್ಗಿದ್ದು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು.

ಹಂಪನಕಟ್ಟೆ ವಿ.ವಿ. ಕಾಲೇಜು ಮುಂಬಾಗದಲ್ಲಿರುವ ಬಸ್ ತಂಗುದಾಣವನ್ನು ರಾತ್ರೋ ರಾತ್ರಿ ತೆರವುಗೊಳಿಸಿರುವು ಶೋಚನೀಯ ಸಂಗತಿ. ಈ ಬಸ್ ತಂಗುದಾಣವು ಅಲ್ಲಿಯ ಎಲ್ಲಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ, ಆಸ್ಪತ್ರೆ ಮತ್ತು ಇನ್ನಿತರ ಸಾರ್ವಜನಿಕ ಸ್ಥಳಗಳಿಗೆ ಬರುವವರಿಗೆ ಅನುಕೂಲಕರವಾಗಿದ್ದು, ಇದೀಗ ತಂಗುದಾಣವನ್ನು ತೆರವುಗೊಳಿಸಿರುವುದು ಅಲ್ಲಿಯ ಜನಸಾಮಾನ್ಯರು ಮತ್ತು ವಿದ್ಯಾರ್ಥಿಗಳು ಮಳೆ ಮತ್ತು ಬಿಸಿಲಲ್ಲಿ ಛತ್ರಿಗಳನ್ನು ಹಿಡಿದು ನಿಲ್ಲುವ ಅನಿವಾರ್ಯತೆ ಎದುರಾಗಿದೆ. ಅದಲ್ಲದೇ ನಗರದಲ್ಲಿರುವ ಪ್ರಮುಖ ಕಾಲೇಜುಗಳ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೂ ಈ ಬಸ್ ತಂಗುದಾಣ ಆಸರೆಯಾಗಿತ್ತು. ಕೂಡಲೇ ಬಸ್ ತಂಗುದಾಣಗಳನ್ನು ನಿರ್ಮಾಣ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸಮಸ್ಯೆ ಬಗೆಹರಿಸುವಂತೆ ಮಂಗಳೂರು ತಹಿಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.