ಡೈಲಿ ವಾರ್ತೆ: 14/Sep/2024

ಬಾರಿ ಮಳೆಯಿಂದ ಜಲಾವೃತಗೊಂಡ ಅಂಡರ್‌ಪಾಸ್‌ ನಲ್ಲಿ ಕಾರು ಮುಳುಗಿ ಬ್ಯಾಂಕ್ ಮ್ಯಾನೇಜರ್ ಮತ್ತು ಕ್ಯಾಷಿಯರ್ ಮೃತ್ಯು!

ನವದೆಹಲಿ: ಭಾರಿ ಮಳೆಯಿಂದಾಗಿ ಶುಕ್ರವಾರ ದೆಹಲಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಜೊತೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡು ಓಲ್ಡ್ ಫರಿದಾಬಾದ್ ರೈಲ್ವೆ ಅಂಡರ್‌ಪಾಸ್‌ನಲ್ಲಿ ಸುಮಾರು ಹತ್ತು ಅಡಿಯಷ್ಟು ನೀರು ನಿಂತ್ತಿದ್ದು ಎಸ್‌ಯುವಿ ಕಾರೊಂದು ನೀರಿನಲ್ಲಿ ಮುಳುಗಿ ಬ್ಯಾಂಕ್ ಮ್ಯಾನೇಜರ್ ಮತ್ತು ಕ್ಯಾಷಿಯರ್ ಮೃತಪಟ್ಟಿರುವ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದೆ.

ಮೃತರನ್ನು ಪುಣ್ಯಾಶ್ರಯ್ ಶರ್ಮಾ (48) ಮತ್ತು ವಿರಾಜ್ (26) ಎಂದು ಗುರುತಿಸಲಾಗಿದ್ದು ಗುರುಗ್ರಾಮ್‌ನಿಂದ ಗ್ರೇಟರ್ ಫರಿದಾಬಾದ್‌ನಲ್ಲಿರುವ ಮನೆಗೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಶುಕ್ರವಾರ (ಸೆ. 13) ಭಾರೀ ಮಳೆಯಿಂದಾಗಿ ಅಂಡರ್‌ಪಾಸ್‌ ಸಂಪೂರ್ಣ ಜಲಾವೃತಗೊಂಡಿದ್ದು, ಮುನ್ನೆಚ್ಚರಿಕೆಯಾಗಿ ಕಾರುಗಳು ಸೇರಿದಂತೆ ಇತರ ವಾಹನಗಳು ಪ್ರವೇಶಿಸದಂತೆ ಬ್ಯಾರಿಕೇಡ್ ಗಳನ್ನೂ ಇಟ್ಟು ಎಚ್ಚರಿಕೆ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಆದರೆ ತಡರಾತ್ರಿ ರಾತ್ರಿ 11:50 ರ ಸುಮಾರಿಗೆ ಮಹೀಂದ್ರಾ XUV 700 ಕಾರಿನಲ್ಲಿ ಬಂದ ಬ್ಯಾಂಕ್ ಅಧಿಕಾರಿಗಳು ಬ್ಯಾರಿಕೇಡ್ ನಿರ್ಲಕ್ಷಿಸಿ ಅಂಡರ್‌ಪಾಸ್‌ಗೆ ಕಾರನ್ನು ಕೊಂಡೊಯ್ದಿದ್ದಾರೆ ಈ ವೇಳೆ ನೀರಿನಲ್ಲಿ ಕಾರು ಸಿಲುಕಿಕೊಂಡಿದೆ, ನಂತರ ವಾಹನದೊಳಗೆ ನೀರು ನುಗ್ಗಿದೆ ಎನ್ನಲಾಗಿದೆ. ಈ ಸಮಯದಲ್ಲಿ ಅಲ್ಲಿದ್ದ ದಾರಿಹೋಕರು ಕಾರಿನಲ್ಲಿ ಸಿಲುಕಿದ ಇಬ್ಬರನ್ನು ರಕ್ಷಿಸಲು ಯತ್ನಿಸಿದ್ದಾರೆ ಸಾಕಷ್ಟು ಪ್ರಯತ್ನಗಳ ನಂತರ ಇಬ್ಬರನ್ನು ಕಾರಿನಿಂದ ಹೊರಗೆ ಎಳೆದಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ವಿರಾಜ್ ಕೊನೆಯುಸಿರೆಳೆದಿದ್ದರು ಗಂಭೀರ ಸ್ಥಿತಿಯಲ್ಲಿದ್ದ ಪುಣ್ಯಾಶ್ರಯ್ ಅವರನ್ನು ಬಾದ್‌ಶಾ ಖಾನ್ ಸಿವಿಲ್ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.