ಡೈಲಿ ವಾರ್ತೆ: ಫೆ./22/2026

ಕಾರ್ಕಳ| ರಸ್ತೆ ತಡೆ ವಿವಾದ: ಕಾರಿನಿಂದ ಡಿಕ್ಕಿ ಹೊಡೆಯಲು ಯತ್ನ, ಹಲ್ಲೆ, ಬೆದರಿಕೆ: ಪ್ರಕರಣ ದಾಖಲು

ಕಾರ್ಕಳ: ಕಸಬಾ ಗ್ರಾಮದ ಕುಂಬ್ರಪದವು ಪ್ರದೇಶದಲ್ಲಿ ರಸ್ತೆ ತಡೆ ವಿಚಾರವಾಗಿ ಉಂಟಾದ ಗಲಾಟೆ ಹಲ್ಲೆ ಮತ್ತು ಜೀವಬೆದರಿಕೆಗೆ ತಿರುಗಿದ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ಮೂಡಬಿದ್ರೆಯ ಪಣಪಿಲ ಗ್ರಾಮದ ನಿತಿನ್ (35) ಅವರು ಸ್ನೇಹಿತರೊಂದಿಗೆ ಆಟೋರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ, ಕೆಎ-20 ಎಂ ಜಿ-0204 ನಂಬರಿನ ಬಿಳಿ ಬಣ್ಣದ i10 ಕಾರು ರಸ್ತೆಯಲ್ಲಿ ಅಡ್ಡವಾಗಿ ನಿಲ್ಲಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹಾರ್ನ್ ಹಾಕಿದರೂ ಕಾರನ್ನು ತೆರವುಗೊಳಿಸದ ಹಿನ್ನೆಲೆ ಅವರು ಕಾರಿನ ಬಳಿ ತೆರಳಿ ವಿಚಾರಿಸಿದಾಗ ಆರೋಪಿ ಸೋಮನಾಥನೊಂದಿಗೆ ವಾಗ್ವಾದ ಉಂಟಾಗಿದೆ ಎನ್ನಲಾಗಿದೆ.

ಈ ವೇಳೆ ಕಾರನ್ನು ತೆಗೆಯುವುದಿಲ್ಲ ಎಂದು ಹೇಳಿ ಆರೋಪಿಯು ಏಕಾಏಕಿ ಕಾರು ಚಲಾಯಿಸಿ ದೂರುದಾರರ ಮೇಲೆ ಹಾರಿಸಲು ಯತ್ನಿಸಿದರೆಂದು, ಅವರು ತಪ್ಪಿಸಿಕೊಂಡ ನಂತರ ಆರೋಪಿಯು ಕೈಯಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಧ್ಯಪ್ರವೇಶಿಸಿದ ಸ್ನೇಹಿತರಿಗೆ ಸಹ ಬೆದರಿಕೆ ಹಾಕಲಾಗಿದೆ. ಬಳಿಕ ಸಂಜೆ ವೇಳೆ ಪರಿಚಿತನಿಗೆ ಕರೆ ಮಾಡಿ ಮತ್ತೆ ಬೆದರಿಕೆ ಹಾಕಿರುವುದಾಗಿ ತಿಳಿದುಬಂದಿದೆ.

ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2026ರಡಿ BNS ಕಲಂ 109, 352, 351(2), 115(2) ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.