ಡೈಲಿ ವಾರ್ತೆ: ಫೆ./22/2026

ಅಂಕೋಲಾ| ಮಂಜಗುಣಿ-ಗಂಗಾವಳಿ ಸೇತುವೆ ಲೋಕಾರ್ಪಣೆ, ಜೂನ್ ಒಳಗೆ ತ್ರಿಸ್ತರ ಪಂಚಾಯಿತಿ ಚುನಾವಣೆ: ಸಿಎಂ ಸಿದ್ದರಾಮಯ್ಯ

ವರದಿ: ವಿದ್ಯಾಧರ ಮೊರಬಾ

ಅಂಕೋಲಾ, ಫೆ.22: ಜೂನ್ ತಿಂಗಳೊಳಗೆ ಗ್ರಾಮಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಾರ್ಡ್‌ಗಳ ಮರುಹಂಚಿಕೆ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ಈಗಾಗಲೇ ಪ್ರಾರಂಭಗೊಂಡಿದ್ದು, ಈ ಸಂಬಂಧ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಅಂಕೋಲಾದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ನಿರ್ಮಿತ ಮಂಜಗುಣಿ – ಗಂಗಾವಳಿ ಸೇತುವೆಯನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, “2018ರಲ್ಲಿ ಈ ಸೇತುವೆಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ನಂತರದ ಸರ್ಕಾರದ ಅವಧಿಯಲ್ಲಿ ಕಾಮಗಾರಿ ನಿರ್ಲಕ್ಷ್ಯಕ್ಕೊಳಗಾಯಿತು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಮಗಾರಿ ಪುನರಾರಂಭಗೊಂಡು ಈಗ ಪೂರ್ಣಗೊಂಡಿದೆ,” ಎಂದು ಹೇಳಿದರು. ಆರಂಭದಲ್ಲಿ 28 ಕೋಟಿ ರೂಪಾಯಿ ಅಂದಾಜು ವೆಚ್ಚವಿದ್ದ ಯೋಜನೆ, ನಂತರ 35 ಕೋಟಿಗೆ ಏರಿಕೆಯಾಗಿದೆ ಎಂದು ವಿವರಿಸಿದರು.
ಈ ಸೇತುವೆ ನಿರ್ಮಾಣದಿಂದ ಸುಮಾರು 18 ಕಿ.ಮೀ ದೂರ ಕಡಿಮೆಯಾಗುತ್ತಿದ್ದು, ಜನರಿಗೆ ಸಮಯ ಮತ್ತು ಇಂಧನ ಉಳಿತಾಯವಾಗಲಿದೆ. ಪರಿಸರ ಮಾಲಿನ್ಯ ನಿಯಂತ್ರಣಕ್ಕೂ ಇದು ಸಹಾಯಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾಂಗ್ರೆಸ್ ಸರ್ಕಾರ ಯಾವತ್ತಿಗೂ ಜನಪರವಾಗಿದ್ದು, ಅಭಿವೃದ್ಧಿ ಕಾರ್ಯಗಳಲ್ಲಿ ಬದ್ಧವಾಗಿದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, 334 ಕಿ.ಮೀ ಉದ್ದದ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದರು. ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಹೊರರಾಜ್ಯಗಳಿಗೆ ಉದ್ಯೋಗಕ್ಕಾಗಿ ತೆರಳುವ ಪರಿಸ್ಥಿತಿಯನ್ನು ತಪ್ಪಿಸುವ ಉದ್ದೇಶವಿದೆ ಎಂದು ತಿಳಿಸಿದರು. “ಗೋವಾಕ್ಕೆ ಹೋಗುವವರು ಕೂಡ ಇಲ್ಲಿಗೆ ಬರುವಂತಾಗಬೇಕು,” ಎಂದು ಹೇಳಿದರು.

ಶಾಸಕ ಸತೀಶ ಸೈಲ್ ಮಾತನಾಡಿ, ಬಹುದಶಕಗಳ ಬೇಡಿಕೆಯಾಗಿದ್ದ ಮಂಜಗುಣಿ–ಗಂಗಾವಳಿ ಸೇತುವೆ ನಮ್ಮ ಸರ್ಕಾರದ ಅವಧಿಯಲ್ಲಿ ನಿರ್ಮಾಣಗೊಂಡಿರುವುದು ಸಂತಸದ ಸಂಗತಿ ಎಂದರು. ಅಲಗೇರಿಯಲ್ಲಿ ವಿಮಾನ ನಿಲ್ದಾಣಕ್ಕಾಗಿ ಬೇಲೆಕೇರಿ ಹಾಗೂ ಭಾವಿಕೇರಿ ಗ್ರಾಮಗಳ ಭೂಸ್ವಾಧೀನದ ಸಂದರ್ಭದಲ್ಲಿನ ಪರಿಹಾರ ವೈಷಮ್ಯವನ್ನು ಸರಿಪಡಿಸಿ, ಎಲ್ಲರಿಗೂ ಸಮಾನ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು. ಮನೆ ನಿರ್ಮಾಣಕ್ಕಾಗಿ ನೀಡಲಾಗುತ್ತಿದ್ದ ಒಂದೂವರೆ ಗುಂಟೆ ಜಾಗವನ್ನು 5 ಗುಂಟೆಗೆ ಏರಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕರಾದ ಆರ್.ವಿ. ದೇಶಪಾಂಡೆ, ಭೀಮಣ್ಣ ನಾಯ್ಕ, ದಿನಕರ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಕ್ಷದ ಕಾರ್ಯಕರ್ತರು ಮತ್ತು ಸಾವಿರಾರು ಮಂದಿ ಸಾರ್ವಜನಿಕರು ಉಪಸ್ಥಿತರಿದ್ದರು.