ಡೈಲಿ ವಾರ್ತೆ: 17/Sep/2024

ಕೆರಾಡಿ- ಬೆಳ್ಳಾಲ ಶ್ರೀಮೂಕಾಂಬಿಕಾ ಅಭಯಾರಣ್ಯದಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಮೀನು ಸಂಸ್ಕರಣಾ ಘಟಕ ಸ್ಥಾಪನೆಗೆ ಸಿದ್ಧತೆ!

ಕುಂದಾಪುರ: ಪಶ್ಚಿಮ ಘಟ್ಟ ತಪ್ಪಲಿನ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ವ್ಯಕ್ತಿಯೊರ್ವರು ಮೀನು ಸಂಸ್ಕರಣಾ ಘಟಕ ಸ್ಥಾಪಿಸಲು ಮುಂದಾಗಿದ್ದು, ಇದು ಪರಿಸರದ ಜನರನ್ನು ಕೆರಳಿಸಿದೆ. ಘಟಕ ಸ್ಥಾಪನೆಗೆ ಸಂಬಂಧಿಸಿದ ಇಲಾಖೆಗಳು ಕಣ್ಣುಮುಚ್ಚಿ ಅನುಮತಿ ನೀಡಿರುವುದು ಇನ್ನೊಂದು ಆಶ್ಚರ್ಯ! ಈ ಬಗ್ಗೆ ಅರಣ್ಯ ಇಲಾಖೆ, ತಹಶೀಲ್ದಾರರಿಗೆ ಪರಿಸರದ ನಿವಾಸಿಗಳು ದೂರು ಕೊಟ್ಟಿದ್ದರೂ, ತನಿಖೆಯ ಕಣ್ಣಾಮುಚ್ಚಾಲೆ ನಡೆಸಿದ ಅಧಿಕಾರಿಗಳು ಯಾವುದೋ ಆಮಿಷಕ್ಕೆ ಬಲಿಯಾದಂತೆ ಕಂಡುಬರುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕುಂದಾಪುರ ತಾಲೂಕಿನ ಘಟ್ಟದ ತಪ್ಪಲಿನ ಬೆಳ್ಳಾಲ ಎಂಬಲ್ಲಿ ನಾಗರಾಜ ಎಸ್. ಎಂಬವರು 6.46 ಎಕರೆ ಜಮೀನು ಹೊಂದಿದ್ದಾರೆ. ಇದು ಶ್ರೀ ಮುಕಾಂಬಿಕಾ ಅಭಯಾರಣ್ಯ ಸುತ್ತುವರಿದ ಭಾಗವಾಗಿರುತ್ತದೆ. ಈ ವ್ಯಾಪ್ತಿಯ ಸಿದ್ದಾಪುರ ವನ್ಯಜೀವಿ ವಲಯದ ಮೂಡ್ಗಲ್ ಪಾರೆ ಮೀಸಲು ಅರಣ್ಯ ಪ್ರದೇಶವಾಗಿದ್ದು ವನ್ಯ ಜೀವಿಗಳ ಆವಾಸ ಸ್ಥಾನವಾಗಿರುತ್ತದೆ.

ಈ ನಡುವೆ ನಾಗರಾಜ ಅವರು ತಮ್ಮ ಸರ್ವೇ ನಂಬ್ರ 88 ರ ಜಮೀನಿನಲ್ಲಿ ಕೆಂಪು ಕಲ್ಲು ತೆಗೆಯುವ ಬಗ್ಗೆ ಇಲಾಖೆಯಿಂದ ಅನುಮತಿ ಪಡೆದುಕೊಂಡು ಕಲ್ಲು ತೆಗೆದು ಸಾಗಿಸತೊಡಗಿದರು. ವಾಸ್ತವವಾಗಿ ಅವರು ಒಂದೂವರೆ ಎಕರೆ ಪ್ರದೇಶದಲ್ಲಿನ ಕಲ್ಲು ತೆಗೆಯಲು ಅನುಮತಿ ಪಡೆದಿದ್ದರು. ಆದರೆ, ಸುತ್ತಲಿನ ಅರಣ್ಯ ಭೂಮಿಯನ್ನು ಅತಿಕ್ರಮಿಸಿ ಬೇಲಿ ಹಾಕಿ ಅಲ್ಲಿಂದಲೂ ಕಲ್ಲು ಗಣಿಗಾರಿಕೆ ಶುರುಮಾಡಿದಾಗ ಪರಿಸರದ ನಿವಾಸಿಗಳು ಆಕ್ಷೇಪ ಸೂಚಿಸಿದರು. ಇದೆಲ್ಲದರ ಅರಿವಿದ್ದ ಅರಣ್ಯ ಇಲಾಖೆ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸಿದರು.

ಕಡೆಗೂ ಜನರ ಪ್ರತಿಭಟನೆಗೆ ಮಣಿದ ಸಿದ್ದಾಪುರ ವಲಯ ಅರಣ್ಯಾಧಿಕಾರಿಗಳು ಕುಂದಾಪುರ ತಹಶೀಲ್ದಾರರಿಗೆ ಒಂದು ವರದಿ ಸಲ್ಲಿಸುತ್ತಾರೆ. ಇದರಲ್ಲಿ ನಾಗರಾಜ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ಸಿಮೆಂಟ್ ಕಂಬ ನೆಟ್ಟು ಬೇಲಿ ನಿರ್ಮಿಸಿದ್ದಾರೆ. ಈ ಪ್ರದೇಶವು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಬರುತ್ತಿದ್ದು, ಅಕ್ರಮ ಚಟುವಟಿಕೆಯಿಂದ ವನ್ಯ ಜೀವಿಗಳ ಸಂಚಾರಕ್ಕೆ ಧಕ್ಕೆ ಉಂಟಾಗಿದೆ. ಇಲ್ಲಿ ಇನ್ನೂ ಅಕ್ರಮ ಚಟುವಟಿಕೆಗಳು ಹಾಗೂ ಸರ್ಕಾರಿ ಭೂಮಿ ಒತ್ತುವರಿಯಾಗುವ ಅಪಾಯವಿದೆ ಎಂದು ತಿಳಿಸುತ್ತಾರೆ. 2022ರ ಅಕ್ಟೊಬರ್ 28 ರಂದು ವರದಿ ಕೈಸೇರಿದ್ದರೂ ತಹಶೀಲ್ದಾರರ ಪ್ರತಿಕ್ರಿಯೆ ಶೂನ್ಯವಾಗಿತ್ತು.

ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಈ ನಮೂನೆ ಅಕ್ರಮ ನಡೆಯುತ್ತಿದ್ದರೂ ಸಂಬಂಧಿಸಿದ ಇಲಾಖಾಕಾರಿಗಳು ಜಡತ್ವ ಹೊಂದಿರುವುದು ಅಕ್ರಮ ಚಟುವಟಿಕೆದಾರರ ಪ್ರಭಾವವನ್ನು ಸಾಬೀತುಪಡಿಸುತ್ತದೆ.

ಈ ಅಕ್ರಮಗಳಿಂದ ಕಂಗೆಟ್ಟ ಸ್ಥಳೀಯರು ಮತ್ತೊಮ್ಮೆ ಅರಣ್ಯಾಧಿಕಾರಿಗಳಿಗೆ ದೂರು ಸಲ್ಲಿಸುತ್ತಾರೆ. ಇದರನ್ವಯ ವಂಡ್ಸೆ ಘಟಕದ ಪ್ರಭಾರ ಉಪ ವಲಯ ಅರಣ್ಯಾಧಿಕಾರಿಗಳು 2024 ರ ಮಾರ್ಚ್ 13 ರಂದು ಕುಂದಾಪುರ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳಿಗೆ ಇನ್ನೊಂದು ಪರಿಶೀಲನಾ ವರದಿ ನೀಡುತ್ತಾರೆ.

ಈ ವರದಿಯಲ್ಲಿ ಸ್ಪಷ್ಟವಾಗಿ ನಮೂದಿಸಿದಂತೆ, ಅಭಯಾರಣ್ಯದ ಸುತ್ತುಗಟ್ಟು ಪ್ರದೇಶದೊಳಗೆ ಬರುವ ಕಂದಾಯ ಜಮೀನು ಅಣ್ಯದ ಬಫರ್ ಜೋನ್ ಪ್ರದೇಶವಾಗಿರುತ್ತದೆ. ಇಲ್ಲಿ ಅನುಮತಿ ಪಡೆದ ಜಾಗಕ್ಕಿಂತ ಹೆಚ್ಚು ಜಾಗದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದರೂ ವನ್ಯ ಜೀವಿ ವಿಭಾಗದವರು ನಿರಾಪೇಕ್ಷಣಾ ಪತ್ರ ನೀಡಿದ್ದಾರೆ ಎಂದು ಪಟ್ಟಾದಾರರು ಹೇಳುತ್ತಿದ್ದಾರೆ!!

ಇಲ್ಲಿಂದ ತೆಗೆದ ಕಲ್ಲುಗಳನ್ನು ಬೇರೆಡೆಗೆ ಸಾಗಿಸಬಾರದು ಎಂಬ ಷರತ್ತು ಇದ್ದರೂ ಕಲ್ಲುಗಳು ಬೇರೆ ಪ್ರದೇಶಗಳಿಗೆ ಸಾಗುತ್ತಿವೆ. ಇಲ್ಲಿ ಕೆಂಪು ಕಲ್ಲುಗಳನ್ನು ಹಾಕಿ ರಸ್ತೆ ನಿರ್ಮಾಣ ಮಾಡಿದ್ದರೂ ವನ್ಯಜೀವಿ ವಲಯಾಧಿಕಾರಿಗಳು ಕುರುಡರಂತಿದ್ದಾರೆ. ಇದು ಪರೋಕ್ಷವಾಗಿ ಅಕ್ರಮಿಗಳಿಗೆ ಸಹಾಯ ಮಾಡಿದಂತಿದೆ. ಮೂಕಾಂಬಿಕಾ ಅಭಯಾರಣ್ಯದೊಳಗಿಂದ ಕೆಂಪು ಕಲ್ಲುಗಳು ರಾಜಾರೋಷವಾಗಿ ಹೊರ ಸಾಗುತ್ತಿದ್ದರೂ ಅರಣ್ಯಾಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ.

ಇಲಾಖೆಗಳ ಪರೋಕ್ಷ ಸಹಕಾರದಿಂದ ತಾನೇನು ಮಾಡಿದರೂ ಜನರು ತಡೆಯಲಾರರು ಎಂಬ ಹುಮ್ಮಸ್ಸು ಪಡೆದ ಜಾಗದ ಮಾಲೀಕ ಇದೀಗ ಇಲ್ಲಿ ಮೀನು ಸಂಸ್ಕರಣಾ ಘಟಕ ಸ್ಥಾಪಿಸಲು ಮುಂದಾಗಿದ್ದಾರೆ. ಅದಕ್ಕೆ ಸಂಬಂಧಿಸಿದ ಅನುಮತಿಗಳನ್ನು ಪಡೆದುಕೊಳ್ಳಲಾಗಿದೆ ಎಂದು ಹೇಳುವ ಅವರು ಇಲಾಖೆಗಳು ಮತ್ತು ಜನರ ವಿರೋಧಗಳಿಗೆ ಕ್ಯಾರೇ ಎನ್ನುತ್ತಿಲ್ಲ ಎಂಬುದು ಸ್ಥಳೀಯರ ಅಳಲು.

ಬೆಳ್ಳಾಲದ ಸ್ಥಳೀಯರು ಈಗಾಗಲೇ ಪ್ರತಿಭಟನೆ ನಡೆಸಿದ್ದು ಪರಿಣಾಮ ಶೂನ್ಯವಾಗಿದೆ. ಆದ್ದರಿಂದ ಆಕ್ರೋಶಿತರಾದ ಜನರು ಬುಧವಾರ ಕೆರಾಡಿ ಪಂಚಾಯತ್ ಮುಂಭಾಗದಲ್ಲಿ ಉಗ್ರ ಹೋರಾಟ ಹಮ್ಮಿಕೊಂಡಿದ್ದಾರೆ. ಲಂಚಬಾಕ ಅಧಿಕಾರಿಗಳನ್ನು ಶಿಕ್ಷಸಬೇಕು. ಪರಿಸರ ಹಾಳುಗೆಡವುವ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಬೇಕು. ವನ್ಯಜೀವಿಗಳು ಮತ್ತು ವನ್ಯ ಸಂಪತ್ತನ್ನು ರಕ್ಷಿಸಬೇಕು. ಸಾರ್ವಜನಿಕ ಅಹವಾಲುಗಳಿಗೆ ವರದಿಗಳ ಮೇಲೆ ವರದಿ ಸಲ್ಲಿಸುತ್ತಾ ಸೂಕ್ತ ಕ್ರಮ ಜರುಗಿಸದೆ ಆಟ ಆಡುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಭಾರೀ ಪ್ರತಿಭಟನೆ ನಡೆಸಲು ತಯಾರಿ ನಡೆದಿದೆ. ಇನ್ನಾದರೂ ಅಧಿಕಾರಿಗಳ ನಿದ್ದೆ ತೊಲಗುವುದೋ ಕಾದು ನೋಡಬೇಕಾಗಿದೆ.