ಡೈಲಿ ವಾರ್ತೆ: 17/Sep/2024
ಪಾರಂಪಳ್ಳಿ ನೂರುಲ್ ಇಸ್ಲಾಂ ಮದರಸ ಕಮಿಟಿ ವತಿಯಿಂದ ಭಾವೈಕ್ಯತೆಯ ಈದ್ ಮಿಲಾದ್ ಕಾರ್ಯಕ್ರಮ: ನಾವೆಲ್ಲರೂ ಮಾನವರಾಗಿ ಬದುಕಬೇಕು:ಆನಂದ್ ಸಿ ಕುಂದರ್
ಕೋಟ: ನಾವೆಲ್ಲರೂ ಮಾನವರಾಗಿ ಬದುಕಬೇಕು, ಒಬ್ಬರನ್ನೊಬ್ಬರು ಪ್ರೀತಿಸಬೇಕು, ಬಡವರ ಕಣ್ಣೀರನ್ನುವರಿಸಬೇಕು ಎನ್ನುವ ಪ್ರವಾದಿಯವರ ಸಂದೇಶವನ್ನು ಪಾಲಿಸಬೇಕೆಂದು ಗೀತಾನಂದ ಟ್ರಸ್ಟ್ ಪ್ರವರ್ತಕರಾದ ಆನಂದ್ ಸಿ ಕುಂದರ್ ಹೇಳಿದರು.
ಅವರು ಸೆ. 16 ರಂದು ಸೋಮವಾರ ಪಾರಂಪಳ್ಳಿ
ನೂರುಲ್ ಇಸ್ಲಾಂ ಮದರಸ ಕಮಿಟಿವತಿಯಿಂದ ನಡೆದ ವಿಶ್ವ ಪ್ರವಾದಿ ಮೊಹಮ್ಮದ್ ಮುಸ್ತಫಾ (ಸ.ಅ.) ರವರ ಜನ್ಮ ದಿನಾಚರಣೆ ಪ್ರಯುಕ್ತ ನಡೆದ ಸಾಂಸ್ಕೃತಿಕ ಹಾಗೂ ಭಾವೈಕ್ಯತೆಯ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪಾರಂಪಳ್ಳಿ ಮುಸ್ಲಿಂ ಬಾಂಧವರು ಸರ್ವಧರ್ಮ ಸಮ್ಮೇಳನ ರೀತಿಯಲ್ಲಿ ಯಾವುದೇ ಜಾತಿ ಧರ್ಮ ವೇದವಿಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಿದ್ದೀರಿ. ಈ ಕಾರ್ಯಕ್ರಮ ಅತ್ಯಂತ ಪ್ರೀತಿದಾಯಕವಾದದ್ದು. ಇದೇ ರೀತಿ ಮುಂದುವರಿಯಲಿ ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಬೆರತು ಹೋದರೆ ಮಾತ್ರ ನಮ್ಮ
ಸಮಾಜ ಮುಂದೆ ಹೋಗಲು ಸಾಧ್ಯ. ಅಲ್ಲದೆ ಊರಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು,ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ ಉದ್ಯಮಿ ಆಸಿಫ್ ಪಾರಂಪಳ್ಳಿ, ಉಪನ್ಯಾಸಕರಾದ ರಿಪೀಕ್ ಮಾಸ್ಟರ್ ಮಂಗಳೂರು ಇವರನ್ನು ಸನ್ಮಾನಿಸಲಾಯಿತು.
ಸೌಹಾರ್ದತೆಯಾಗಿ ಸರ್ವಧರ್ಮದ ಪ್ರತಿಭಾವಂತ ವಿದ್ಯಾರ್ಥಿಗಳಾದ ಮಾನ್ಯ, ಸಾಥ್ವಿಕ್, ಖಾಲಿಲ್, ಮೊಹಮ್ಮದ್ ಅಫ್ರಾನ್, ಶಮ್ನ, ರಿಹಾಬ್, ಅಲೀಝ ಇಸ್ಮಾಯಿಲ್ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮದರಸ ಅಧ್ಯಕ್ಷ ಇಸ್ಮಾಯಿಲ್ ಪಾರಂಪಳ್ಳಿ, ಕಾರ್ಯದರ್ಶಿ ಶಫಿಯುಲ್ಲಾ, ಎಂ.ಜೆ.ಎಂ ಮಸೀದಿಯ ಖತಿಬ್ ರಾದ ಸಿದ್ದಿಕ್ ಸಖಾಫಿ, ಎಂ.ಜೆ.ಎಂ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಬಿ.ಕೆ., ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಪಾರಂಪಳ್ಳಿ, ಹಿದಾಯತುಲ್ ಇಸ್ಲಾಂ ಅರಬಿಕ್ ಮದರಸ ಕೋಟತಟ್ಟು ಇದರ ಅಧ್ಯಕ್ಷ ಇಸ್ಮಾಯಿಲ್ ಮುಂತಾದವರು ಉಪಸ್ಥಿತರಿದ್ದರು.
ಇಸ್ಮಾಯಿಲ್ ಪಾರಂಪಳ್ಳಿ ಕಾರ್ಯಕ್ರಮವನ್ನು ಸ್ವಾಗತಿಸಿದರು.
ಶಾಹಿಲ್ ನಿರೂಪಿಸಿ, ವಂದಿಸಿದರು.