ಡೈಲಿ ವಾರ್ತೆ: 18/Sep/2024

ಕಾಂತರಾ ಖ್ಯಾತಿಯ ಕೆರಾಡಿಗೆ ತಟ್ಟಿತೆ ಅಕ್ರಮ ಗಣಿಗಾರಿಕೆಯ ಕಳಂಕ.! ಕೆರಾಡಿ- ಬೆಳ್ಳಾಲ ಶ್ರೀಮೂಕಾಂಬಿಕಾ ಅಭಯಾರಣ್ಯದಲ್ಲಿ ಮೀನು ಸಂಸ್ಕರಣಾ ಘಟಕ ಸ್ಥಾಪನೆ ವಿರೋಧಿಸಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ – ಕೊನೆಗೂ ಹೋರಾಟಕ್ಕೆ ಮಣಿದ ಪಂಚಾಯತ್: ಪರವಾನಿಗೆ ರದ್ದು ಗೊಳಿಸುವುದಾಗಿ ಭರವಸೆ

ಕುಂದಾಪುರ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ‘ಕಾಂತರ‘ ಸಿನೆಮಾದ ನಾಯಕ ನಟ ರಿಷಬ್ ಶೆಟ್ಟಿಯ ಹುಟ್ಟೂರಾದ ಪಶ್ಚಿಮ ಘಟ್ಟ ತಪ್ಪಲಿನ ಸೂಕ್ಷ್ಮ ಪ್ರದೇಶವಾದ ಕೆರಾಡಿ- ಬೆಳ್ಳಾಲ ಶ್ರೀಮೂಕಾಂಬಿಕಾ ಅಭಯಾರಣ್ಯದಲ್ಲಿ ಕೋಟೇಶ್ವರದ ಬೀಜಾಡಿ ನಾಗರಾಜ್ ಬೆಟಿನ್ ಎನ್ನುವ
ವ್ಯಕ್ತಿಯೊರ್ವರು ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಹಾಗೂ ಮೀನು ಸಂಸ್ಕರಣಾ ಘಟಕ ಸ್ಥಾಪಿಸಲು ಮುಂದಾಗಿದ್ದು, ಇದು ಪರಿಸರದ ಜನರನ್ನು ಕೆರಳಿಸಿದೆ.
ಘಟಕ ಸ್ಥಾಪನೆಗೆ ಸಂಬಂಧಿಸಿದ ಇಲಾಖೆಗಳು ಕಣ್ಣುಮುಚ್ಚಿ ಅನುಮತಿ ನೀಡಿರುವುದು ವಿರೋಧಿಸಿ ಸೆ. 18 ಬುಧವಾರ ಕೆರಾಡಿ ಗ್ರಾಮ ಪಂಚಾಯತ್ ಮುಂಭಾಗ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಕುಂದಾಪುರ ತಹಸಿಲ್ದಾರ್ ಶೋಭಾ ಲಕ್ಷ್ಮೀ ಅವರು ಸ್ಥಳ ಪರಿಶೀಲನೆ ಮಾಡಿ ಪ್ರತಿಭಟನಾಕಾರರಿಂದ ಮನವಿಯನ್ನು ಸ್ವೀಕರಿಸಿ, ಈಗಾಗಲೇ ಸ್ಥಳ ಪರಿಶೀಲನೆ ಮಾಡಿದ್ದೇನೆ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುತ್ತೇನೆ, ಮತ್ತು ಸರಕಾರಿ ಜಾಗದಲ್ಲಿರುವ ಮರವನ್ನು ಕಡಿದ ಬಗ್ಗೆ ಅರಣ್ಯ ಇಲಾಖೆಯವರು ಆ ವ್ಯಕ್ತಿಯ ಮೇಲೆ ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ. ಹಾಗೂ ಅಲ್ಲಿ ರಸ್ತೆ ನಿರ್ಮಾಣ ಮಾಡಿದ ಸ್ಥಳ ಸರಕಾರದ್ದೋ ಅಥವ ಅರಣ್ಯ ಇಲಾಖೆಗೆ ಸೇರಿದ್ದೋ ಎಂದು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇನೆ.ಮೀನು ಸಂಸ್ಕರಣಾ ಘಟಕ ಸ್ಥಾಪಿಸಲು ಮುಂದಾಗಿದ್ದು ಅದರ ವಿರುದ್ಧ ಗ್ರಾಮಸ್ಥರ ವಿರೋಧ ಇರುವುದರಿಂದ ಪರವಾನಿಗೆ ರದ್ದುಗೊಳಿಸಲು ಸೆಪ್ಟೆಂಬರ್ 20 ರಂದು ಕೆರಾಡಿ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಪರವಾನಿಗೆ ರದ್ದು ಗೊಳಿಸುವುದಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೇಳಿದ್ದಾರೆ. ಇನ್ನು ಹಂದಿ ಫಾರ್ಮ್ ಬಗ್ಗೆ ಅದರ ಮಾಲೀಕರಲ್ಲಿ ಎಲ್ಲಾ ದಾಖಲೆಗಳನ್ನು ತರಲು ಹೇಳಿದ್ದೇನೆ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈ ಗೊಳ್ಳುತೇನೆ ಎಂದರು.
ಆದ್ದರಿಂದ ನಿಮ್ಮ ಅನಿರ್ದಿಷ್ಟಾವಧಿ ಧರಣಿಯನ್ನು ಇಲ್ಲಿಗೆ ನಿಲ್ಲಿಸಬೇಕೆಂದು ಪ್ರತಿಭಟನಾಕಾರರಲ್ಲಿ ಕೇಳಿಕೊಂಡರು.

ವಂಡ್ಸೆ ಶಾಖೆಯ ಉಪವಲಯ ಅರಣ್ಯಾಧಿಕಾರಿ ಸಂಗೀತ ಶೆಟ್ಟಿ ಮಾತನಾಡಿ ಸರಕಾರಿ ಸ್ಥಳದಲ್ಲಿ ಮರ ಕಡಿದ ಬಗ್ಗೆ 08/04 2024 ರಂದು ಖಾಸಗಿ ವ್ಯಕ್ತಿ ಬೀಜಾಡಿ ನಾಗರಾಜ್ ಬೆಟ್ಟಿನ್ ಅವರ ಮೇಲೆ ಪ್ರಕರಣ ದಾಖಲಿಸಿ ಮರಗಳನ್ನು ವಶಪಡಿಸಿ ಕೊಂಡಿರುತ್ತೇವೆ. ಮುಂದಿನ ದಿನಗಲ್ಲಿ ಚಾರ್ಜ್ ಶೀಟ್ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದು ವಲಯ ಅರಣ್ಯಾಧಿಕಾರಿಗಳ ಪರವಾಗಿ ಹೇಳಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಅಧ್ಯಕ್ಷರು ಪ್ರತಿಭಟನೆಕಾರರಲ್ಲಿ ಸೆ. 20 ರಂದು ಸಾಮಾನ್ಯ ಸಭೆ ಕರೆದು ಪಂಚಾಯತ್ ಸದಸ್ಯರ ಒಮ್ಮತದಿಂದ ಮೀನು ಸಂಸ್ಕರಣ ಘಟಕದ ಪರವಾನಿಗೆ ರದ್ದುಪಡಿಸುವುದಾಗಿ ಭರವಸೆ ನೀಡಿ ಪ್ರತಿಭಟನೆಯನ್ನು ಕೈಬಿಡಲು ಮನವಿ ಮಾಡಿಕೊಂಡರು.
ಅದರಂತೆ ಗ್ರಾಮಸ್ಥರು ಅಧಿಕಾರಿಗಳ ಮಾತಿಗೆ ಸಮ್ಮತಿಸಿ ಪ್ರತಿಭಟನೆ ನಿಲ್ಲಿಸಿದರು.

ಸ್ಥಳದಲ್ಲಿ ಮುಂಜಾಗ್ರತ ಕ್ರಮವಾಗಿ ಬೈಂದೂರ್ ವೃತ್ತ ನಿರೀಕ್ಷಕರಾದ ಸವಿತ್ರತೇಜ ಹಾಗೂ ಕೊಲ್ಲೂರು ಠಾಣೆಯ ಎಸ್ಐ ಜಯಶ್ರೀ ಅವರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಘಟನೆ ವಿವರ:
ಕುಂದಾಪುರ ತಾಲೂಕಿನ ಘಟ್ಟದ ತಪ್ಪಲಿನ ಬೆಳ್ಳಾಲ ಎಂಬಲ್ಲಿ ನಾಗರಾಜ ಎಸ್. ಎಂಬವರು 6.46 ಎಕರೆ ಜಮೀನು ಹೊಂದಿದ್ದಾರೆ. ಇದು ಶ್ರೀ ಮುಕಾಂಬಿಕಾ ಅಭಯಾರಣ್ಯ ಸುತ್ತುವರಿದ ಭಾಗವಾಗಿರುತ್ತದೆ. ಈ ವ್ಯಾಪ್ತಿಯ ಸಿದ್ದಾಪುರ ವನ್ಯಜೀವಿ ವಲಯದ ಮೂಡ್ಗಲ್ ಪಾರೆ ಮೀಸಲು ಅರಣ್ಯ ಪ್ರದೇಶವಾಗಿದ್ದು ವನ್ಯ ಜೀವಿಗಳ ಆವಾಸ ಸ್ಥಾನವಾಗಿರುತ್ತದೆ.

ಈ ನಡುವೆ ನಾಗರಾಜ ಬೆಟ್ಟಿನ್ ಅವರು ತಮ್ಮ ಸರ್ವೇ ನಂಬ್ರ 88 ರ ಜಮೀನಿನಲ್ಲಿ ಕೆಂಪು ಕಲ್ಲು ತೆಗೆಯುವ ಬಗ್ಗೆ ಇಲಾಖೆಯಿಂದ ಅನುಮತಿ ಪಡೆಯದೆ ಕಲ್ಲು ತೆಗೆದು ಸಾಗಿಸತೊಡಗಿದರು. ಆದರೆ, ಸುತ್ತಲಿನ ಅರಣ್ಯ ಭೂಮಿಯನ್ನು ಅತಿಕ್ರಮಿಸಿ ಬೇಲಿ ಹಾಕಿ ಅಲ್ಲಿಂದಲೂ ಕಲ್ಲು ಗಣಿಗಾರಿಕೆ ಶುರುಮಾಡಿದಾಗ ಪರಿಸರದ ನಿವಾಸಿಗಳು ಆಕ್ಷೇಪ ಸೂಚಿಸಿದರು. ಇದೆಲ್ಲದರ ಅರಿವಿದ್ದ ಅರಣ್ಯ ಇಲಾಖೆ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸಿದರು.

ಕಡೆಗೂ ಜನರ ಪ್ರತಿಭಟನೆಗೆ ಮಣಿದ ಸಿದ್ದಾಪುರ ವಲಯ ಅರಣ್ಯಾಧಿಕಾರಿಗಳು ಕುಂದಾಪುರ ತಹಶೀಲ್ದಾರರಿಗೆ ಒಂದು ವರದಿ ಸಲ್ಲಿಸುತ್ತಾರೆ. ಇದರಲ್ಲಿ ನಾಗರಾಜ ಬೆಟ್ಟಿನ್ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ಸಿಮೆಂಟ್ ಕಂಬ ನೆಟ್ಟು ಬೇಲಿ ನಿರ್ಮಿಸಿದ್ದಾರೆ. ಈ ಪ್ರದೇಶವು ಸೂಕ್ಷ್ಮಅರಣ್ಯ ವಲಯ ವ್ಯಾಪ್ತಿಗೆ ಬರುತ್ತಿದ್ದು, ಅಕ್ರಮ ಚಟುವಟಿಕೆಯಿಂದ ವನ್ಯ ಜೀವಿಗಳ ಸಂಚಾರಕ್ಕೆ ಧಕ್ಕೆ ಉಂಟಾಗಿದೆ. ಇಲ್ಲಿ ಇನ್ನೂ ಅಕ್ರಮ ಚಟುವಟಿಕೆಗಳು ಹಾಗೂ ಸರ್ಕಾರಿ ಭೂಮಿ ಒತ್ತುವರಿಯಾಗುವ ಅಪಾಯವಿದೆ ಎಂದು ತಿಳಿಸುತ್ತಾರೆ. 2022ರ ಅಕ್ಟೊಬರ್ 28 ರಂದು ವರದಿ ಕೈಸೇರಿದ್ದರೂ ಅಂದಿನ ತಹಶೀಲ್ದಾರರ ಪ್ರತಿಕ್ರಿಯೆ ಶೂನ್ಯವಾಗಿತ್ತು.

ಈ ಅಕ್ರಮಗಳಿಂದ ಕಂಗೆಟ್ಟ ಸ್ಥಳೀಯರು ಮತ್ತೊಮ್ಮೆ ಅರಣ್ಯಾಧಿಕಾರಿಗಳಿಗೆ ದೂರು ಸಲ್ಲಿಸುತ್ತಾರೆ. ಇದರನ್ವಯ ವಂಡ್ಸೆ ಘಟಕದ ಪ್ರಭಾರ ಉಪ ವಲಯ ಅರಣ್ಯಾಧಿಕಾರಿಗಳು 2024 ರ ಮಾರ್ಚ್ 13 ರಂದು ಕುಂದಾಪುರ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳಿಗೆ ಇನ್ನೊಂದು ಪರಿಶೀಲನಾ ವರದಿ ನೀಡುತ್ತಾರೆ.

ಈ ವರದಿಯಲ್ಲಿ ಸ್ಪಷ್ಟವಾಗಿ ನಮೂದಿಸಿದಂತೆ, ಅಭಯಾರಣ್ಯದ ಸುತ್ತುಗಟ್ಟು ಪ್ರದೇಶದೊಳಗೆ ಬರುವ ಕಂದಾಯ ಜಮೀನು ಅರಣ್ಯದ ಬಫರ್ ಜೋನ್ ಪ್ರದೇಶವಾಗಿರುತ್ತದೆ. ಇಲ್ಲಿ ಖರೀದಿ ಮಾಡಿದ ಜಾಗಕ್ಕಿಂತ ಹೆಚ್ಚು ಜಾಗದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದರೂ ವನ್ಯ ಜೀವಿ ವಿಭಾಗದವರು ನಿರಾಪೇಕ್ಷಣಾ ಪತ್ರ ನೀಡಿದ್ದಾರೆ ಎಂದು ಪಟ್ಟಾದಾರರು ಹೇಳುತ್ತಿದ್ದಾರೆ!!

ಇಲ್ಲಿಂದ ತೆಗೆದ ಕಲ್ಲುಗಳನ್ನು ಬೇರೆಡೆಗೆ ಸಾಗಿಸಬಾರದು ಎಂಬ ಷರತ್ತು ಇದ್ದರೂ ಕಲ್ಲುಗಳು ಬೇರೆ ಪ್ರದೇಶಗಳಿಗೆ ಸಾಗುತ್ತಿವೆ. ಇಲ್ಲಿ ಕೆಂಪು ಕಲ್ಲುಗಳನ್ನು ಹಾಕಿ ರಸ್ತೆ ನಿರ್ಮಾಣ ಮಾಡಿದ್ದರೂ ವನ್ಯಜೀವಿ ವಲಯಾಧಿಕಾರಿಗಳು ಕುರುಡರಂತಿದ್ದಾರೆ. ಇದು ಪರೋಕ್ಷವಾಗಿ ಅಕ್ರಮಿಗಳಿಗೆ ಸಹಾಯ ಮಾಡಿದಂತಿದೆ. ಮೂಕಾಂಬಿಕಾ ಅಭಯಾರಣ್ಯದೊಳಗಿಂದ ಕೆಂಪು ಕಲ್ಲುಗಳು ರಾಜಾರೋಷವಾಗಿ ಹೊರ ಸಾಗುತ್ತಿದ್ದರೂ ಅರಣ್ಯಾಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ.

ಇಲಾಖೆಗಳ ಪರೋಕ್ಷ ಸಹಕಾರದಿಂದ ತಾನೇನು ಮಾಡಿದರೂ ಜನರು ತಡೆಯಲಾರರು ಎಂಬ ಹುಮ್ಮಸ್ಸು ಪಡೆದ ಜಾಗದ ಮಾಲೀಕ ಇದೀಗ ಇಲ್ಲಿ ಮೀನು ಸಂಸ್ಕರಣಾ ಘಟಕ ಸ್ಥಾಪಿಸಲು ಮುಂದಾಗಿದ್ದಾರೆ. ಇದರಿಂದಾಗಿ ಆಕ್ರೋಶಿತರಾದ ಬೆಳ್ಳಾಲದ ಗ್ರಾಮಸ್ಥರು ಕೆರಾಡಿ ಪಂಚಾಯತ್ ಮುಂಭಾಗದಲ್ಲಿ ಬುಧವಾರ ಉಗ್ರ ಪ್ರತಿಭಟನೆ ಮಾಡಿದರು.