ಡೈಲಿ ವಾರ್ತೆ: 21/Sep/2024
ಅತ್ಯಾಚಾರ ಆರೋಪ: ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನ
ಬೆಂಗಳೂರು: ಆತ್ಯಾಚಾರ ಹಾಗೂ HIV ಸೋಂಕಿತ ಮಹಿಳೆಯನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡ ಆರೋಪದ ಮೇಲೆ ಕಗ್ಗಲೀಪುರ ಪೊಲೀಸರ ವಶದಲ್ಲಿರುವ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ಅವರು ಗುರುವಾರವಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು.
ಮುನಿರತ್ನರನ್ನು ಪೊಲೀಸರು ಶನಿವಾರ ಕೋರ್ಟ್‌ಗೆ ಹಾಜರುಪಡಿಸಿದ್ದು, ಅಕ್ಟೋಬರ್ 5ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ. ಮುನಿರತ್ನ ಬಂಧನದ ಬೆನ್ನಲ್ಲೇ ಅವರ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬರುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಮುನಿರತ್ನ ಅಳಲು:
ಆರೋಪಿ ಮುನಿರತ್ನ ಅವರು ಕೆಲ ಕ್ಷಣಗಳ ಕಾಲ ಭಾವುಕರಾಗಿ ನ್ಯಾಯಾಧೀಶರಿಗೆ, “ಎರಡು ನಿಮಿಷ ಮಾತಾಡುತ್ತೇನೆ ಸಾರ್” ಎಂದು ಮನವಿ ಮಾಡಿದರು.
“ದೂರು ನೀಡಿದವರು ನನ್ನ ಜೊತೆಗೇ ಇದ್ದವರು. ಈಗ ಅವರಿಂದಲೇ ದೂರು ಕೊಡಿಸಲಾಗುತ್ತಿದೆ. ಒಂದು ಕೇಸಿನಲ್ಲಿ ಜಾಮೀನು ಸಿಗುತ್ತಿದ್ದಂತೆಯೇ ಮತ್ತೊಂದು ದೂರು ದಾಖಲಿಸಿಕೊಂಡು ಅರೆಸ್ಟ್ ಮಾಡಿಸಿದ್ದಾರೆ. ಬೇಕಂತಲೇ ರಾಜಕೀಯ ದುರುದ್ದೇಶದಿಂದ ಕೇಸ್ ಕೇಸುಗಳ ಮೇಲೆ ಕೇಸು ಮಾಡಿಸಿ ನನ್ನ ತೇಜೋವಧೆಗೆ ಯತ್ನಿಸುತ್ತಿದ್ದಾರೆ. ಶಾಸಕನಾಗಿರುವ ಕಾರಣದಿಂದಲೇ ಈ ರೀತಿ ಕೇಸುಗಳನ್ನು ಹಾಕಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಈ ರೀತಿಯ ದೂರು ಕೊಡಿಸಲಾಗುತ್ತಿದೆ. ಈ ದೂರನ್ನು ಯಾವಾಗ ಬೇಕಾದರೂ ನೀಡಬಹುದಿತ್ತು. ನಾನು ನಾಲ್ಕು ಬಾರಿ ಶಾಸಕನಾಗಿರುವವನು. ಸಚಿವನಾಗಿದ್ದವನು. ನನಗೆ ನೀಡಲಾಗುತ್ತಿರುವ ಈ ರೀತಿಯ ಕಿರುಕುಳದಿಂದ ಬೇಸತ್ತಿದ್ದೇನೆ. ಬೇಕಾದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲೂ ಸಿದ್ಧವಿದ್ದೇನೆ” ಎಂದರು.