ಡೈಲಿ ವಾರ್ತೆ: 25/Sep/2024
ಬಂಟ್ವಾಳ: ಪಿ.ಎಲ್.ಡಿ ಬ್ಯಾಂಕ್ ಸಾಧನೆ ಶೂನ್ಯ, ಸಿದ್ದರಾಮಯ್ಯ ಸರ್ಕಾರದ ಕೃಷಿ ಸಾಲದ ಬಡ್ಡಿ ಮನ್ನಾ ಯೋಜನೆಯಿಂದಾಗಿ ವಸೂಲಾತಿ, ಸುದರ್ಶನ್ ಜೈನ್
ಬಂಟ್ವಾಳ : ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೃಷಿ ಸಾಲಗಳ ಬಡ್ಡಿ ಮನ್ನಾ ಘೋಷಣೆಯ ೭೪ ಲಕ್ಷ ರೂ. ಬಂದಿದ್ದು, ಇದರ ಪ್ರಯೋಜನ ಪಡೆಯುವ ಉದ್ದೇಶದಿಂದ ರೈತರು ಬಾಕಿ ಸಾಲದ ೧೦೪ ಲಕ್ಷ ರೂ. ಅಸಲು ಪಾವತಿಸಿ ಒಟ್ಟು ೧೭೮ ಲಕ್ಷ ರೂ. ಜಮೆಯಾದ ಕಾರಣ ೨೦೨೩-೨೪ನೇ ಸಾಲಿನಲ್ಲಿ ೧.೦೫ ಕೋ.ರೂ. ಲಾಭ ಪಡೆದು ೧೧ ಶೇ. ಲಾಭಾಂಶ ನೀಡಲು ಸಾಧ್ಯವಾಗಿದೆ ಎಂದು ಬಂಟ್ವಾಳ ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ, ದ.ಕ.ಜಿಲ್ಲಾ ಕಾಂಗ್ರೆಸ್ ಸಹಕಾರಿ ಘಟಕದ ಸಂಚಾಲಕ ಸುದರ್ಶನ್ ಜೈನ್ ಹೇಳಿದ್ದಾರೆ.
ಬಿ.ಸಿ.ರೋಡಿನ ಹೋಟೆಲ್ ರಂಗೋಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತಿಹಾಸದಲ್ಲೇ ೧೧ ಶೇ. ಲಾಭಾಂಶ ವಿತರಣೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಸುಳ್ಳು ಹೇಳುತ್ತಿದ್ದು, ಅವರು ರಾಜ್ಯ ಸರಕಾರದ ಬಡ್ಡಿ ಮನ್ನಾದ ಕುರಿತು ಪ್ರಸ್ತಾಪವನ್ನೇ ಮಾಡಿಲ್ಲ. ಬ್ಯಾಂಕಿನ ಕಟ್ಟಡವು ಕಾಂಗ್ರೆಸ್ ಬೆಂಬಲಿತ ಆಡಳಿತ ಮಂಡಳಿಯ ಸಾಧನೆಯಾಗಿದ್ದು, ಹೀಗಾಗಿ ವಾರ್ಷಿಕ ೩೦ ಲಕ್ಷ ರೂ. ಬಾಡಿಗೆ ಬರುತ್ತಿದೆ. ಇದು ಕೂಡ ಹೆಚ್ಚಿನ ಲಾಭಕ್ಕೆ ಕಾರಣವಾಗಿದೆ.
ಈಗಿನ ಆಡಳಿತ ಮಂಡಳಿಯು ಕಾಂಗ್ರೆಸ್ ಬೆಂಬಲಿತ ರೈತರನ್ನು ಟಾರ್ಗೆಟ್ ಮಾಡಿ ಸಾಲ ವಸೂಲಿಯ ಪ್ರಕರಣ ದಾಖಲಿಸುತ್ತಿದ್ದು, ಜತೆಗೆ ಸಾಲ ಹಂಚಿಕೆಯಲ್ಲೂ ತಾರತಮ್ಯ ಮಾಡುತ್ತಿದೆ. ಬ್ಯಾಂಕಿನ ವ್ಯವಸ್ಥಾಪಕರಿಗೆ ಸುಳ್ಯಕ್ಕೆ ವರ್ಗಾವಣೆಯಾಗಿದ್ದರೂ, ಆಡಳಿತ ಮಂಡಳಿ ರಾಜ್ಯ ಬ್ಯಾಂಕಿನ ವಿರುದ್ಧ ತೀರ್ಮಾನ ಮಾಡಿ ಅವರ ತಾಳಕ್ಕೆ ತಕ್ಕ ಕುಣಿಯಲು ಇಲ್ಲೇ ಉಳಿಸಿಕೊಂಡಿದೆ. ಇದರ ಕುರಿತು ದೂರು ಸಲ್ಲಿಸಿದ ಕಲಂ ೬೪ರಡಿ ವಿಚಾರಣೆಗೆ ಎಆರ್ ಅವರನ್ನು ತನಿಖಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಶಾಸಕರ ಒತ್ತಡದಿಂದ ಈ ತನಿಖೆಯ ಮೂರು ತಿಂಗಳ ಅವಧಿ ಮುಗಿದರೂ ಇನ್ನೂ ಸಮಯಾವಕಾಶ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
ನಿರ್ದೇಶಕ ಸ್ಥಾನ ಅನರ್ಹತೆಯ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಕುರಿತು ಯಾವುದೇ ಆದೇಶ ಪತ್ರ ನನಗೆ ಬಂದಿಲ್ಲ. ನಾನು ಸಾಲದ ಮರುಪಾವತಿ ಮಾಡಿದ್ದು, ಅವರೇ ದೃಢಪತ್ರ ನೀಡಿದ್ದಾರೆ ಎಂದರು.
ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್, ಇದರ ಮಹಾಸಭೆ ಜರಗಿದ್ದು ಬ್ಯಾಂಕಿನ ಕೃಷಿಕ ಸದಸ್ಯರುಗಳಿಗೆ ತಪ್ಪು ಮಾಹಿತಿಗಳನ್ನು ನೀಡುವ ಮುಖಾಂತರ ದ್ರೋಹ ಬಗೆಯಲಾಗಿದೆ ಎಂದು ಆರೋಪಿಸಿದರು.
ಈ ಬ್ಯಾಂಕಿನ ಆಡಳಿತ ಮಂಡಳಿಯ ಹಲವು ಸದಸ್ಯರು ೨೦೨೦ ರಲ್ಲಿ ಆಯ್ಕೆಯಾಗಿದ್ದು ಚುನಾವಣೆಯಲ್ಲಿ ಬಹಳಷ್ಟೂ ಸದಸ್ಯರಲ್ಲದವರು, ಮತದಾನ ಇಲ್ಲದವರು, ಸತ್ತವರು ಮತದಾನ ಮಾಡಿದ್ದರಿಂದ ಆಯ್ಕೆಯಾಗಿರುವುದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ . ಫಫ್ರಅದಕ್ಕಾಗಿ ಗೌರವಾನ್ವಿತ ಕರ್ನಾಟಕ ಹೈಕೋರ್ಟ್ ಆಡಳಿತ ಮಂಡಳಿಗೆ ತಡೆಯಾಜ್ಞೆ ನೀಡಿದ್ದರು. ಕರ್ನಾಟಕ ರಾಜ್ಯ ಸಹಕಾರಿ ಕಾಯ್ದೆ ತಿದ್ದುಪಡಿ ಮಸೂದೆ ೨೦೨೪ ರ ಬ್ಯಾಂಕ್ ಸಹಕಾರಿ ಸಂಘಗಳ ಮಹಾ ಸಭೆಗಳಿಗೆ ಹಾಜರಾಗದವರಿಗೂ ಮತದಾನದ ಹಕ್ಕನ್ನು ನೀಡುವ ಮಸೂದೆ ಮಂಡನೆ ಚರ್ಚೆಯಲ್ಲೂ ಸರ್ಕಾರದ ಮೇಲ್ಮನೆ ಸದಸ್ಯರ ಸಮಿತಿಯ ಸಭೆಯಲ್ಲೂ ಇತಿಹಾಸ ಎಂಬಂತೆ ಬಂಟ್ವಾಳದ ಪಿ.ಎಲ್.ಡಿ ಬ್ಯಾಂಕಿನ ಚುನಾವಣೆಯ ಮತದಾನದ ಗೋಲ್ಮಾಲ್ ನ ಉದಾಹರಣೆಯನ್ನು ಉಲ್ಲೇಖಿಸಿರುವುದು ಬ್ಯಾಂಕಿಗೆ ಕಪ್ಪು ಚುಕ್ಕೆಯಾಗಿದೆ. ಕಳೆದೆರಡು ವರ್ಷದಲ್ಲಿ ಹಲವಾರು ಸಹಕಾರಿ ಸಂಘಗಳ ಕಾಯ್ದೆಗಳ ವಿರೋಧವಾಗಿ ಹಾಗೂ ರಾಜ್ಯ ಬ್ಯಾಂಕಿನ ಆದೇಶಗಳ ವಿರುದ್ದವಾಗಿ ಈ ಆಡಳಿತ ಮಂಡಳಿ ಕಾರ್ಯಾಚರಿಸುತ್ತಿರುವುದು ಬ್ಯಾಂಕಿನ ಸದಸ್ಯರುಗಳಿಗೆ ಬಹಳ ಬೇಸರ ತಂದಿದೆ, ಅಲ್ಲದೆ ಈ ಬ್ಯಾಂಕಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸಾಲ ಹಂಚಿಕೆ ಹಾಗೂ ಸಾಲ ವಸೂಲಾತಿಯಲ್ಲಿ ಸಹಕಾರಿ ಕಾಯ್ದೆ ೬೪ ರಡಿ ತನಿಖೆ ನಡೆಯುತ್ತಿದೆ ಎಂದರು
ಸುದ್ದಿಗೋಷ್ಠಿಯಲ್ಲಿ ಮಾಜಿ ನಿದೇರ್ಶಕ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಶಿವಪ್ಪ ಪೂಜಾರಿ ಹಟದಡ್ಕ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳಾದ ಸುದೀಪ್‌ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಪ್ರಮುಖರಾದ ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ಮಧುಸೂಧನ್ ಶೆಣೈ, ಮಹಮ್ಮದ್ ನಂದಾವರ ಉಪಸ್ಥಿತರಿದ್ದರು.