ಡೈಲಿ ವಾರ್ತೆ: 28/Sep/2024
ವರದಿ: ರಶೀದ್ ಕಂಡ್ಲೂರು
ಕಂಡ್ಲೂರು : ನೀರಿನ ಬಕೆಟಿಗೆ ಬಿದ್ದು ಗಂಭೀರ ಸ್ಥಿತಿಗೊಂಡ ಹಸುಗೂಸಿಗೆ ತುರ್ತು ಚಿಕಿತ್ಸೆ ನೀಡಿ ಜೀವ ಉಳಿಸಿದ ವೈದ್ಯರಿಗೆ ಸಾರ್ವಜನಿಕರಿಂದ ಸನ್ಮಾನ
ಕುಂದಾಪುರ: ಆಟವಾಡುತ್ತಾ ಆಡುತ್ತಾ ಅಕಸ್ಮಾತ್ ನೀರಿನ ಬಕೇಟ್ಟಿಗೆ ಬಿದ್ದು ಅಪಾಯಕ್ಕೊಳಗಾದ 11ತಿಂಗಳ ಮಗುವನ್ನು ಡಾಕ್ಟರ್ ಮತ್ತು ಅಂಬುಲೆನ್ಸ್ ಚಾಲಕನ ಮಾನವೀಯತೆ ಬದುಕಿಸಿದ ವಿಶಿಷ್ಟ ಪ್ರಕರಣ ಕುಂದಾಪುರ ಸಮೀಪದ ಕಂಡ್ಲೂರಿನಲ್ಲಿ ನಡೆದಿದೆ.
ಕಂಡ್ಲೂರಿನ ಮೌಲಾನಾ ಕಲಿಮುಲ್ಲಾ ಎಂಬವರ ಹನ್ನೊಂದು ತಿಂಗಳ ಮಗು ಮನೆಯಲ್ಲಿ ಆಟವಾಡುತ್ತಿತ್ತು. ಆಗಷ್ಟೇ ಪುಟ್ಟ ಪುಟ್ಟ ಹೆಜ್ಜೆ ಇಡಲು ಕಲಿತಿದ್ದ ಮಗು ಒಂದೊಂದೇ ತಪ್ಪು ಹೆಜ್ಜೆ ಹಾಕುತ್ತಾ ಖುಷಿಪಡುತ್ತಿತ್ತು. ಸಮೀಪದಲ್ಲೇ ಬಾತ್ ರೂಮಲ್ಲಿದ್ದ ನೀರಿನ ಬಕೆಟ್ ಸಹಜವಾಗಿಯೇ ಮಗುವನ್ನು ಸೆಳೆಯಿತು. ಅದರ ಬಳಿ ಸಾಗಿದ ಕಂದಮ್ಮ ಅಪಾಯದ ಅರಿವಿಲ್ಲದೆ ಬಗ್ಗಿ ನೀರಾಟ ಆಡಲು ತೊಡಗಿತ್ತು. ಅಪಾಯ ಯಾವ ಕ್ಷಣ ಬಂದೆರಗುತ್ತದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಆಯತಪ್ಪಿದ ಮಗು ನೀರಿನ ಬಕೇಟ್ನೊಳಗೇ ಬಿದ್ದುಬಿಟ್ಟಿತು. ಉಸಿರುಗಟ್ಟಿದ ಮಗು ಕ್ಷಣಮಾತ್ರದಲ್ಲಿ ಗಂಭೀರ ಸ್ಥಿತಿಗೆ ತಲುಪಿತು. ತಕ್ಷಣವೇ ಮನೆಯವರು ಕಂಡ್ಲೂರಿನ ಮಂಜುಶ್ರೀ ಕ್ಲಿನಿಕ್ ಗೆ ಮಗುವನ್ನು ಹೊತ್ತೊಯ್ದರು. ಅಲ್ಲಿನ ಡಾ. ಪ್ರಶಾಂತ್ ಶೆಟ್ಟಿ ಆ ಕ್ಷಣ ಮಗುವಿಗೆ ತುರ್ತು ಔಷಧೋಪಚಾರಗಳನ್ನು ಮಾಡಿ ಪ್ರಾಣ ರಕ್ಷಣೆ ಮಾಡಿದರು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ನಲ್ಲಿ ಮಣಿಪಾಲ ಆಸ್ಪತ್ರೆಗೆ ಹೋಗುವಂತೆ ಸಲಹೆ ಮಾಡಿದರು. ಆಯ್ಮಾನ್ ಎಂಬ ಚಾಲಕನಿರುವ ಆಂಬುಲೆನ್ಸ್ ಶರವೇಗದಲ್ಲಿ ಮಣಿಪಾಲ ತಲುಪಿತು. ಅಲ್ಲಿ ಹೆಚ್ಚಿನ ಚಿಕಿತ್ಸೆಯ ನಂತರ ಈ ಕಂದಮ್ಮ ಸಂಪೂರ್ಣ ಚೇತರಿಸಿಕೊಂಡು ತಾಯಿಯ ಮಡಿಲು ಸೇರಿದೆ.
ಇಂತಹ ತುರ್ತು ಸಂದರ್ಭದಲ್ಲಿ ಆಪತ್ಬಾಂಧವರಂತೆ ಸಹಕರಿಸಿದ ಡಾ. ಪ್ರಶಾಂತ್ ಶೆಟ್ಟಿ ವಕ್ವಾಡಿ ಮತ್ತು ಶರವೇಗದ ಆಂಬುಲೆನ್ಸ್ ಚಾಲಕ ಆಯ್ಮಾನ್ ರ ಸಹಾಯ, ಮಾನವೀಯತೆ ಸ್ಪಂದನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಮಗುವಿನ ಪೋಷಕರು ಅವರಿಬ್ಬರನ್ನೂ ಸನ್ಮಾನಿಸಿ ಕೃತಜ್ಞತೆ ಸಮರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಕಾವ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಲಿಯಾಖತ್ ಬೆಟ್ಟೆ, ಜಾಮಿಯಾ ಝಿಯಾ ಉಲ್ ಉಲೂಮ್ ಕಂಡ್ಲೂರು ಇದರ ಬೋಧಕರು, ಉಲೇಮಾಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಡಾ. ಪ್ರಶಾಂತ್ ಶೆಟ್ಟಿ ಮತ್ತು ಆಂಬುಲೆನ್ಸ್ ಚಾಲಕ ಆಯ್ಮಾನ್ ರ ಸೇವೆಯನ್ನು ಕಂಡ್ಲೂರಿನ ಜನರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.