ಡೈಲಿ ವಾರ್ತೆ: 03/OCT/2024
ಸಾಲಿಗ್ರಾಮ ಮಕ್ಕಳ ಮೇಳಕ್ಕೆ 50 ರ ಸುವರ್ಣ ಪರ್ವ
ಕೋಟ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದ್ವಯರಾದ ದಿವಂಗತ ಕಾರ್ಕಡ ಶ್ರೀನಿವಾಸ ಉಡುಪ ಹಾಗೂ ಎಚ್. ಶ್ರೀಧರ ಹಂದೆಯವರ ಕನಸಿನ ಕೂಸು ಸಾಲಿಗ್ರಾಮ ಮಕ್ಕಳ ಮೇಳ.
ಯಕ್ಷಗಾನದ ಇತಿಹಾಸದಲ್ಲಿ 1975 ರ ಅಕ್ಟೋಬರ್ 10 ನೇ ತಾರೀಖು ಮಕ್ಕಳ ಮೇಳ ಉದಯವಾದದ್ದು ಒಂದು ಮೈಲಿಗಲ್ಲು. ಯಕ್ಷಗಾನದ ಬಡಗುತಿಟ್ಟಿನ ಹಾರಾಡಿ, ಮಟಪಾಡಿ ತಿಟ್ಟುಗಳ ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯದ ಕುಣಿತ, ವೇಷಭೂಷಣಗಳ ಅನನ್ಯತೆಯನ್ನು ಉಳಿಸಿ ಬೆಳೆಸುವಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ್ದು ದೇಶದ ಉದ್ದಗಲಕ್ಕೂ ಯಶಸ್ವೀ ದಿಗ್ವಿಜಯ. ಸ್ಥಾಪನೆಯಾದ ಮೂರೇ ವರ್ಷದಲ್ಲಿ ಅಂದರೆ 1978 ರಲ್ಲಿ ಅಮೇರಿಕಾದ ವಿಶ್ವ ಮಕ್ಕಳ ಉತ್ಸವದಲ್ಲಿ ಪಾಲ್ಗೊಳ್ಳಲು ಭಾರತದ ಏಕೈಕ ತಂಡವಾಗಿ ಆಯ್ಕೆ. ಯಕ್ಷಗಾನವನ್ನು ಮೊತ್ತ ಮೊದಲ ಬಾರಿಗೆ ವಿದೇಶಕ್ಕೆ ಕೊಂಡೊಯ್ದ ಸೀಮೋಲ್ಲಂಘನದ ಜಾಗತಿಕ ದಾಖಲೆಯ ಮಕ್ಕಳ ಮೇಳವು ಸ್ಯಾನ್ ಜೋಸ್, ಅಟ್ಲಾಂಟಾ, ಬಫೆಲೋ, ನ್ಯೂಯಾರ್ಕ್, ವಾಷಿಂಗ್ಟನ್ ಮೊದಲಾದೆಡೆ ಯಕ್ಷಕಂಪನ್ನೂ ಪಸರಿಸಿ ಹಲವರಿಂದ ಸೈ ಎನಿಸಿತು. 1985 ರಲ್ಲಿ ಬೆಹರಿನ್ ಕನ್ನಡ ಸಂಘದ ಆಹ್ವಾನದ ಮೇರೆಗೆ ತೆರಳಿ ಮರುಭುಮಿಯಲ್ಲೂ ಕಲೆಯ ಒಸರು ಜಿನುಗುವಂತೆ ಮಾಡಿತು. 1988 ರಲ್ಲಿ ಇಂಗ್ಲೆಂಡ್ ನ ಮೆಂಚೆಸ್ಟರ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕದ ಕಲಾ ತಂಡದೊಂದಿಗೆ ಯಶಸ್ವೀ ಯಕ್ಷಪ್ರದರ್ಶನ.
ಸುವರ್ಣ ಪರ್ವ:
ಸಾಲಿಗ್ರಾಮ ಮಕ್ಕಳ ಮೇಳಕ್ಕೆ ಇದೀಗ 50 ರ ಸಂಭ್ರಮ ಇದೇ ಅಕ್ಟೋಬರ್ 10 ರಿಂದ ಮುಂದಿನ 2025 ರ ಅಕ್ಟೋಬರ್ 10 ರ ವರೆಗೆ ರಾಜ್ಯದ ವಿವಿಧೆಡೆ, ಸ್ಥಳೀಯ ಸಂಘ ಸಂಸ್ಥೆಗಳ ವಿಶ್ವಾಸದೊಂದಿಗೆ ಯಕ್ಷಗಾನಕ್ಕೆ ಸಂಬಂಧಿಸಿದ ವಿಚಾರಸಂಕಿರಣ, ಕಮ್ಮಟ, ಮಕ್ಕಳ ಕ್ಷೇತ್ರದಲ್ಲಿ ಕೃಷಿ ಮಾಡಿದ ಸಾಧಕರಿಗೆ, ಸಂಸ್ಥೆಗಳಿಗೆ ಗೌರವ ಸಂಮಾನ, ತಾಳಮದ್ದಳೆ, ಶಾಲಾ ಕಾಲೇಜುಗಳಲ್ಲಿ ಪ್ರಾತ್ಯಕ್ಷಿಕೆ, ಸಾಂಪ್ರಾದಾಯಿಕ ಯಕ್ಷಪ್ರದರ್ಶನಗಳನ್ನು ಆಯೋಜಿಸುವ ಹುಮ್ಮಸ್ಸು.
ಉದ್ಘಾಟನಾ ಪರ್ವ : 2024 ರ ಅಕ್ಟೋಬರ್ 10 ಗುರುವಾರದಂದು ಧರ್ಮಸ್ಥಳದ ಹೆಗ್ಗಡೆಯವರ ಬೀಡಿನಲ್ಲಿ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ದೀಪ ಪ್ರಜ್ವಲನಗೊಂಡು ಸುವರ್ಣ ಪರ್ವ ಉದ್ಘಾಟನೆಗೊಳ್ಳಲಿದೆ. ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರಾದ ಎಚ್. ಶ್ರೀಧರ ಹಂದೆಯವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ತಾಳಮದ್ದಳೆಯ ಖ್ಯಾತ ಅರ್ಥಧಾರಿ, ಸಂಘಟಕ ಉಜಿರೆ ಅಶೋಕ ಭಟ್ಟರು ಆಶಯ ನುಡಿಗಳಾನ್ನಾಡಲಿದ್ದಾರೆ. ಮಕ್ಕಳ ಮೇಳ ಟ್ರಸ್ಟ್ನ ಕಾರ್ಯಾಧ್ಯಕ್ಷರಾದ ಕೆ. ಮಹೇಶ್ ಉಡುಪ, ಅಧ್ಯಕ್ಷರಾದ ಬಲರಾಮ ಕಲ್ಕೂರ, ಉಪಾಧ್ಯಕ್ಷ ಜನಾರ್ದನ ಹಂದೆ ಉಪಸ್ಥಿತರಿರಲಿದ್ದಾರೆ.
ಅದೇ ವೇದಿಕೆಯಲ್ಲಿ ಉದ್ಘಾಟನಾ ಪರ್ವದ ಅಂಗವಾಗಿ ನವರಾತ್ರಿಯ ಶುಭಾವಸರದಲ್ಲಿ ಮಕ್ಕಳ ಮೇಳದ ಕಲಾವಿದರಿಂದ ಹೂವಿನಕೋಲು ಪ್ರದರ್ಶನ ನಡೆಯಲಿದೆ ಎಂದು ಮಕ್ಕಳ ಮೇಳದ ನಿರ್ದೇಶಕ ಎಚ್. ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.