ಡೈಲಿ ವಾರ್ತೆ: 03/OCT/2024
ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಪಾಕ್ ಕುಟುಂಬ – ಮೂವರು ಪಾಕ್ ಪ್ರಜೆಗಳ ಬಂಧನ
ಬೆಂಗಳೂರು: ಬೆಂಗಳೂರಿನ ಪೀಣ್ಯದಲ್ಲಿದ್ದ ಒಂದೇ ಕುಟುಂಬದ ಮೂವರು ಪಾಕ್ ಪ್ರಜೆಗಳನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ತಾರಿಖ್ ಸಯೀದ್(ಪತಿ), ಅನಿಲ ಸಯೀದ್ (ಪತ್ನಿ), ಇಶ್ರತ್ ಸಯೀದ್ (ಮಗಳು) ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುಟುಂಬ ಮೆಹದಿ ಫೌಂಡೇಶನ್‌ಗೆ ಸೇರಿದ್ದರು. ಪಾಕಿಸ್ತಾನದಿಂದ ಬಾಂಗ್ಲಾಗೆ ಸುಮಾರು ಹದಿನೈದಕ್ಕೂ ಹೆಚ್ಚು ಮಂದಿ ಬಂದಿದ್ದರು, ಅದರಲ್ಲಿ ಈ ಪಾಕ್ ಕುಟುಂಬವಿತ್ತು. ಅಲ್ಲಿಂದ ದೆಹಲಿಗೆ ಅಕ್ರಮವಾಗಿ ಪ್ರವೇಶಿಸಿ, ಭಾರತ ದೇಶದ ನಕಲಿ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್ ಮಾಡಿಕೊಂಡಿದ್ದರು. ಅಲ್ಲಿಂದ ನೇರ ಕೇರಳಕ್ಕೆ ಹೋಗಿದ್ದರು. ಕೇರಳದಿಂದ ದಾವಣಗೆರೆಗೆ ಬಂದಿದ್ದ ಪಾಕ್ ಕುಟುಂಬ, ದಾವಣಗೆರೆಯಲ್ಲಿ ಒಂದು ವರ್ಷಗಳ ಕಾಲ ವಾಸ ಮಾಡುತ್ತಿತ್ತು.
ಕಳೆದ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಪೀಣ್ಯಗೆ ಆಗಮಿಸಿದ್ದರು. ಪೀಣ್ಯದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಕುಟುಂಬ ಮೆಹದಿ ಫೌಂಡೇಶನ್‌ನ ಧರ್ಮ ಮತ್ತು ಧರ್ಮ ಗುರುಗಳ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದರು. ಜಿಗಣಿಯಲ್ಲಿ ಪಾಕ್ ಪ್ರಜೆ ರಷೀದ್ ಫ್ಯಾಮಿಲಿ ಬಂಧನವಾಗಿದ್ದರು. ರಷೀದ್ ತನಿಖೆಯ ವೇಳೆ ಪೀಣ್ಯದಲ್ಲಿ ಮತ್ತೊಂದು ಪಾಕ್ ಫ್ಯಾಮಿಲಿ ಇರುವುದಾಗಿ ಬಾಯಿಬಿಟ್ಟಿದ್ದರು. ಹೀಗಾಗಿ ಮತ್ತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ರಾತ್ರಿ ಪೀಣ್ಯದಿಂದ ಬಂಧನ ಮಾಡಿ ಕರೆತಂದಿದ್ದ ಪೊಲೀಸರು ಮೂವರಿಗೂ ಮೆಡಿಕಲ್ ಚೆಕಪ್ ಮಾಡಿಸಿದ್ದಾರೆ. ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೆಡಿಕಲ್ ಚೆಕಪ್ ಮುಗಿಸಿ ಮತ್ತೆ ಪೊಲೀಸ್ ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.