ಡೈಲಿ ವಾರ್ತೆ: 03/OCT/2024
ಸಾಸ್ತಾನ: ಪಾಂಡೇಶ್ವರ ಶ್ರೀ ಕ್ಷೇತ್ರ ಕಳಿಬೈಲ್ ನಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ
ಕೋಟ: ಶ್ರೀ ಕ್ಷೇತ್ರ ಕಳಿಬೈಲ್ ಶ್ರೀ ತುಳಸಿ ಅಮ್ಮ ಶಿರಸಿ ಮಾರಿಕಾಂಬೆ, ಪಂಜುರ್ಲಿ, ಮತ್ತು ಸ್ವಾಮಿ ಕೊರಗಜ್ಜ ಸಪರಿವಾರ ದೈವಸ್ಥಾನ ಕೆಳಬೆಟ್ಟು, ಮೂಡಹಡು ಗ್ರಾಮ ಸಾಸ್ತಾನದಲ್ಲಿ ನವರಾತ್ರಿ ಉತ್ಸವವು ಅ. 3 ರಂದು ಗುರುವಾರ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮವನ್ನು ರಂಗಭೂಮಿ ಕಲಾವಿದ, ಉದ್ಯಮಿ
ಅಲ್ವಿನ್ ಅಂದ್ರಾದೆ ಸಾಸ್ತಾನ ಅವರು ಚಾಲನೆ ನೀಡಿದರು.
ಅವರು ಮಾತನಾಡಿ ನಮ್ಮ ದೇಶದಾದ್ಯಂತ ವಿಶೇಷವಾಗಿ ಆಚರಿಸುವ ಹಬ್ಬಗಳಲ್ಲಿ ನವರಾತ್ರಿ ಒಂದು. ಇಲ್ಲಿ ಮುಖ್ಯವಾಗಿ ಒಂಭತ್ತು ದಿನಗಳ ಪರ್ಯಂತ ದೇವಿಯ ವಿವಿಧ ರೂಪಗಳ ಆರಾಧನೆ ಮಾಡಲಾಗುತ್ತದೆ. ವಿಶ್ವಾಧಾರವಾದ ಆದಿಶಕ್ತಿಯ ವಿಭಿನ್ನ ರೂಪಗಳನ್ನು ಪೂಜಿಸಲಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿ ಡೈಲಿವಾರ್ತೆ ಸಂಪಾದಕ ಇಬ್ರಾಹಿಂ ಕೋಟ ಮಾತನಾಡಿ ದೇವಿಯ ಆರಾಧನೆಗೆ ನವರಾತ್ರಿಯಲ್ಲಿ ಪ್ರಾಮುಖ್ಯತೆಯಿದೆ. ಈ ಭಾಗದ ಪ್ರಸಿದ್ಧ ಕ್ಷೇತ್ರವಾದ ಕಳಿಬೈಲು ದೇವಾಲಯದಲ್ಲಿನ ಈ ನವರಾತ್ರಿ ಆಚರಣೆಯೇ ಇದಕ್ಕೆ ಸಾಕ್ಷಿ. ಸರ್ವಧರ್ಮದವರ ಸಮ ಭಾವ ಮಿಳಿತವಾದ ಈ ಕ್ಷೇತ್ರದ ಭಕ್ತರು ದೇಶದಾದ್ಯಂತ ಇರುವರು. ಕಳಿಬೈಲು ಕ್ಷೇತ್ರದ ಈ ಉತ್ತಮ ನಡೆ ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಮಾದರಿಯಾಗಲಿ. ಸರ್ವ ಸಮನ್ವಯದ ಶಾಂತಿಯ ತೋಟವಾಗಿ ಕರಾವಳಿ ವಿಜೃಂಭಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮ ಅಧ್ಯಕ್ಷತೆ ದೇವಳದ ಮೊಕ್ತೇಸರರಾದ ಎಂ. ಸಿ. ಚಂದ್ರಶೇಖರ್ ವಹಿಸಿದ್ದರು.
ಶ್ರೀ ಕ್ಷೇತ್ರ ಕಳಿಬೈಲ್ ನ ಸಂಚಾಲಕರು, ಪ್ರಧಾನ ಅರ್ಚಕರಾದ ಅಭಿಜಿತ್ ಪಾಂಡೇಶ್ವರ ಅವರು ಕಾರ್ಯಕ್ರಮವನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪಾಂಡೇಶ್ವರ ಪಂಚಾಯತ್ ಸದಸ್ಯರಾದ ರವಿ ಶ್ರೀಯಾನ್, ಉದ್ಯಮಿ ಸತೀಶ್ ಆಚಾರ್ಯ ಮಂದಾರ್ತಿ, ಭಜನಾ ತಂಡದ ಪ್ರಮುಖರು ಕೃಷ್ಣ ಹಾಗೂ ಬಾಲಾಜಿ ಮಹಿಳಾ ಭಜನಾ ತಂಡದ ಮುಖ್ಯಸ್ಥೆ ಶ್ರೀಮತಿ ಮಮತಾ ಮೊದಲಾದವರು ಉಪಸ್ಥಿತರಿದ್ದರು.
ಶ್ರೀಶ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಬಾಲಾಜಿ ಮಹಿಳಾ ಭಜನಾ ಮಂಡಳಿ ಮೂಡಾಡು ಪಾಂಡೇಶ್ವರ ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು.