ಡೈಲಿ ವಾರ್ತೆ: 09/OCT/2024

ಬ್ರಹ್ಮಾವರದಲ್ಲಿ ಬೃಹತ್ ಉಚಿತ  ಆರೋಗ್ಯ  ಶಿಬಿರ  ಕಾರ್ಯಕ್ರಮ

ಬ್ರಹ್ಮಾವರ: ಪ್ರಯೋರಿಟಿ  ಒನ್ ಇಂಡಿಯಾ  ಸ್ಥಾಪಕ  ಡಾ.ಸಿ.ಟಿ. ಅಬ್ರಹಾಂ  ಅವರ  ಸ್ಮರಣಾರ್ಥವಾಗಿ  ಬ್ರಹ್ಮಾವರ ಕ್ರಾಸ್ ಲ್ಯಾಂಡ್ ಕಾಲೇಜು, ಬ್ರಹ್ಮಾವರ ರೋಟರಿ ಕ್ಲಬ್ ಮತ್ತು ಉಡುಪಿ ಆದರ್ಶ ಆಸ್ಪತ್ರೆಯ ಆಶ್ರಯದಲ್ಲಿ ಬೃಹತ್  ಉಚಿತ  ಆರೋಗ್ಯ ಶಿಬಿರ ಮಂಗಳವಾರ ಬ್ರಹ್ಮಾವರದ ಕ್ರಾಸ್ ಲ್ಯಾಂಡ್ ಕಾಲೇಜಿನ‌ ಸಭಾಂಗಣದಲ್ಲಿ  ನಡೆಯಿತು.

ಪ್ರಯೋರಿಟಿ ಎಜುಕೇಶನಲ್‌ ಫೌಂಡೇಶನ್‌ನ ಮ್ಯಾನೇಜಿಂಗ್‌   ಟ್ರಸ್ಟಿ ಪ್ರೊ.ಮ್ಯಾಥ್ಯೂ ಸಿ ನೈನಾನ್‌ ಶಿಬಿರಕ್ಕೆ ಚಾಲನೆ ನೀಡಿ ರೋಟರಿಯಂತಹ ಸಮಾಜಮುಖಿ ಕಾರ್ಯ ಮಾಡುವಂತಹ  ಸಂಘ ಸಂಸ್ಥೆಗಳಿಂದ ಗ್ರಾಮೀಣ ಭಾಗದ ಅದೆಷ್ಟೋ ಬಡವರಿಗೆ ಪ್ರಯೋಜನವಾಗುತ್ತಿರುವುದು ಶ್ಲಾಘನೀಯ  ವಿಷಯವಾಗಿದೆ. ಡಾ.ಸಿ.ಟಿ. ಅಬ್ರಹಾಂ ಕೂಡ ಸಮಾಜ ಮುಖಿ ಚಿಂತನೆಯುಳ್ಳವರಾಗಿದ್ದರು. ಅವರ ಸ್ಮರಣಾರ್ಥ  ನಡೆದ ಉಚಿತ ಆರೋಗ್ಯ ಶಿಬಿರ  ಅರ್ಥಪೂರ್ಣವಾಗಿದೆ  ಎಂದರು.

ಕ್ರಾಸ್‌ಲ್ಯಾಂಡ್‌ ಕಾಲೇಜಿನ  ಸಂಚಾಲಕಿ ಲಾಲಿ ಎ ಮ್ಯಾಥ್ಯೂ, ಚಾಂತಾರಿನ   ಸಿ.ಎಫ್‌.ಸಿ  ಯುವ ವೇದಿಕೆಯ  ಕಾರ್ಯದರ್ಶಿ ಪ್ರತಾಪ್ ಪೂಜಾರಿ,  ಕುಂಜಾಲು  ಸ್ಫೂರ್ತಿ  ಗೆಳೆಯರ ಬಳಗದ ಕಾರ್ಯದರ್ಶಿ ಕಿರಣ್‌ ಕುಮಾರ್‌, ಚಾಂತಾರಿನ ಚಾನ್ ಸ್ಟಾರ್ ಯೂತ್‌  ಕ್ಲಬ್ ನ  ಸುಧೀರ್‌  ಕುಮಾರ್‌  ಇದ್ದರು.

ಇದೇ ಸಂದರ್ಭ ಬ್ರಹ್ಮಾವರ ರೋಟರಿ ಕ್ಲಬ್‌ ವತಿಯಿಂದ  ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡುತ್ತಿರುವ  ಪ್ರೊ.ಮ್ಯಾಥ್ಯೂ ಸಿ ನೈನಾನ್‌ ಮತ್ತು ಲಾಲಿ ಎ ಮ್ಯಾಥ್ಯೂ  ಅವರನ್ನು  ಸನ್ಮಾನಿಸಲಾಯಿತು. ಆದರ್ಶ ಆಸ್ಪತ್ರೆಯ ಹಿರಿಯ  ವೈದ್ಯ ಡಾ.ಉದಯ ಪ್ರಭು  ಅವರನ್ನು ಗೌರವಿಸಲಾಯಿತು.
ಬ್ರಹ್ಮಾವರ ರೋಟರಿ ಕ್ಲಬ್‌ನ ಮುಂದಿನ ಸಾಲಿನ ಅಧ್ಯಕ್ಷ  ಸತೀಶ ಶೆಟ್ಟಿ ಅಧ್ಯಕ್ಷತೆ  ವಹಿಸಿದ್ದರು.
ಆದರ್ಶ ಆಸ್ಪತ್ರೆಯ ಡಾ. ಉದಯ ಪ್ರಭು, ಶಿಬಿರದ ಸಂಯೋಜಕ ರೋವಿನ್‌, ಡಾ.ರಂಜಿತಾ, ಡಾ.ಗುರುಪ್ರಸಾದ್‌ ಶೆಟ್ಟಿ ಮತ್ತು ಡಾ.ಅಭಿಜಿತ್‌ ಇದ್ದರು.
ಇದಕ್ಕೂ ಮುನ್ನ ಡಾ.ಸಿ.ಟಿ.ಅಬ್ರಹಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ರಾಬರ್ಟ್‌ ಕ್ಲೈವ್‌ ಸ್ವಾಗತಿಸಿದರು. ರೋಟರಿಯ ಆರೂರು ತಿಮ್ಮಪ್ಪ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಾನ್‌  ಸ್ಟಾರ್‌ನ ಸುಧೀರ ಕುಮಾರ್‌  ಶೆಟ್ಟಿ ವಂದಿಸಿದರು.  ಉಪನ್ಯಾಸಕ ಹಾಗೂ ಎನ್‌.ಎಸ್‌.ಎಸ್‌ ಯೋಜನಾಧಿಕಾರಿ ನವೀನ್‌ ಕುಮಾರ್‌ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿದರು.


ಚಾಂತಾರಿನ  ಸಿ.ಎಫ್‌.ಸಿ  ಯುವ  ವೇದಿಕೆ,  ಕುಂಜಾಲು  ಸ್ಫೂರ್ತಿ ಗೆಳೆಯರ ಬಳಗ, ಚಾಂತಾರಿನ ಚಾನ್ ಸ್ಟಾರ್ ಯೂತ್‌ ಕ್ಲಬ್, ಕಾಲೇಜಿನ ಐ.ಕ್ಯೂ.ಎ.ಸಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ  ಸಹಯೋಗದೊಂದಿಗೆ ನಡೆದ ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯ ತಜ್ಜ ವೈದ್ಯರಿಂದ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧೀ  ತಪಾಸಣೆ, ಇ.ಸಿ.ಜಿ ಹಾಗೂ ಸ್ತ್ರೀ ರೋಗ ಸಂಬಂಧಿ ತಪಾಸಣೆಗಳನ್ನು ನಡೆಸಿ ಲಭ್ಯವಿದ್ದ ಔಷಧಿಗಳನ್ನು ಉಚಿತವಾಗಿ ನೀಡಲಾಯಿತು.