ಡೈಲಿ ವಾರ್ತೆ: 09/OCT/2024

ಕೋಟ: ಎಟಿಎಂನಿಂದ ಹಣ ಪಡೆಯುವಾಗ ಸಹಾಯ ಮಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯಿಂದ ವಂಚನೆ

ಕೋಟ: ಎಟಿಎಂನಿಂದ ಹಣ ಪಡೆಯುವಾಗ ಸಹಾಯ ಮಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಂಚಿಸಿದ ಘಟನೆ ಸಾಸ್ತಾನ ನಡೆದಿದೆ.

ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮದ ಚೆನ್ನಪ್ಪ (73) ಎನ್ನುವವರು ಅ. 4 ರಂದು ಬೆಳಿಗ್ಗೆ ಪಾಂಡೇಶ್ವರ ಗ್ರಾಮದ ಸಾಸ್ತಾನದ ಕರ್ನಾಟಕ ಬ್ಯಾಂಕ್ ನ ಎಟಿಎಮ್ ನಲ್ಲಿ ಹಣ ತೆಗೆಯಲು ಒಳಗೆ ಹೋಗಿ 1,000/- ಹಣ ಡ್ರಾ ಮಾಡುತ್ತಿರುವಾಗ ಅದೇ ಸಮಯಕ್ಕೆ ಒಬ್ಬ ಅಪರಿಚಿತ ವ್ಯಕ್ತಿ ಎಟಿಎಂ ಒಳಗೆ ಬಂದು ಚೆನ್ನಪ್ಪ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಅವರಿಗೆ ತಿಳಿಯದ ಹಾಗೆ ಆತನ ಬಳಿ ಇರುವ ಎಟಿಎಂ ಕಾರ್ಡನ್ನು ಚೆನ್ನಪ್ಪಗೆ ನೀಡಿ, ಚೆನ್ನಪ್ಪನ ಬಳಿ ಇರುವ ಕಾರ್ಡನ್ನು ಆತನು ತೆಗೆದುಕೊಂಡು ಮೋಸ ಮಾಡಿ ಹೋಗಿರುತ್ತಾನೆ.

ಅ. 07 ರಂದು ಚೆನ್ನಪ್ಪರವರು ಹಣ ಡ್ರಾ ಮಾಡಲು ಹೋದಾಗ ಅವರ ಖಾತೆಯಲ್ಲಿ ಹಣ ಇರುವುದಿಲ್ಲ ಎಂದು ತೋರಿಸಿದಾಗ ಕೂಡಲೇ ಬ್ಯಾಂಕಿಗೆ ವಿಚಾರಿಸಿದಾಗ ಅವರ ಖಾತೆಯಿಂದ ದಿನಾಂಕ 04/10/2024 ರಿಂದ ದಿನಾಂಕ 06/10/2024 ರವರೆಗೆ ಸಾಲಿಗ್ರಾಮ, ಶಿವಮೊಗ್ಗ, ಕಾರ್ಗಲ್ ಹಾಗೂ ಗೋಕರ್ಣ ಕಡೆಗಳಲ್ಲಿ ಒಟ್ಟು 99,000/- ರೂ. ಹಣವನ್ನು ಚೆನ್ನಪ್ಪರವರ ಖಾತೆಯಿಂದ ಅಪರಿಚಿತ ವ್ಯಕ್ತಿಯು ವಂಚಿಸಿ ಹಣ ಪಡೆದ ಬಗ್ಗೆ ಬೆಳಕಿಗೆ ಬಂದಿದೆ.

ಚೆನ್ನಪ್ಪರವರು ಕೋಟ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿರುತ್ತದೆ.