ಡೈಲಿ ವಾರ್ತೆ: 16/OCT/2024
ಸಾಗರ: ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ನೀಡುತ್ತಿದ್ದಾಗಲೇ ಹೃದಯಾಘಾತದಿಂದ ಶಿಕ್ಷಕ ಮೃತ್ಯು!
ಸಾಗರ: ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ನೀಡುತ್ತಿದ್ದಾಗಲೇ ತೀವ್ರ ಹೃದಯಾಘಾತದಿಂದ ಶಿಕ್ಷಕರೊಬ್ಬರು ಕುಸಿದು ಮೃತಪಟ್ಟ ಘಟನೆ ಅ.16ರ ಬುಧವಾರ ನಡೆದಿದೆ.
ಇಲ್ಲಿನ ಪ್ರಗತಿ ಸಂಯುಕ್ತ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಗಜಾನನ ಹಿರೇಮಠ (50) ನಿಧನ ಹೊಂದಿದವರು.
ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ
ಶಿಕ್ಷಕ ಗಜಾನನ ಅವರು ತಮ್ಮ ಕ್ರಿಯಾಶೀಲತೆಯಿಂದ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆ, ಪೋಷಕರೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿಕೊಂಡು ಜನಪ್ರಿಯರಾಗಿದ್ದರು. ಅವರು ಕಲಾಶಿಕ್ಷಕರಾಗಿ ಕೆಲಸಕ್ಕೆ ಸೇರಿದ್ದು, ಬಳಿಕ ಶಿಕ್ಷಣ ಸಂಸ್ಥೆಯ ಕೋ ಆರ್ಡಿನೇಟರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಂಡ ಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದರು. ಅ.16ರ ಬುಧವಾರ ಗಜಾನನ ಅವರು ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ನೀಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಯಿತಾದರೂ ಮಾರ್ಗ ಮಧ್ಯದಲ್ಲಿ ಅವರು ಅಸುನೀಗಿದ್ದಾರೆ.
ಆಸ್ಪತ್ರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಈ., ಮಲೆನಾಡು ಅಭಿವೃದ್ಧಿ ಪ್ರತಿಷ್ಟಾನದ ಅಧ್ಯಕ್ಷ ಎಂ.ಹರನಾಥರಾವ್, ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಹಾಗೂ ಇನ್ನಿತರರು ಭೇಟಿ ನೀಡಿದರು.