ಡೈಲಿ ವಾರ್ತೆ: 18/OCT/2024
ಕನ್ನಡದ ‘ಬಿಗ್ ಬಾಸ್’ ಸೀಸನ್ 11 ನಿಲ್ಲಿಸುವಂತೆ ತುರ್ತು ನೋಟಿಸ್ ಜಾರಿದ ಕೋರ್ಟ್.!
ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ 11ನೇ ಸೀಸನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕನ್ನಡದ ಬಿಗ್ಬಾಸ್ ಸೀಸನ್ ಆರಂಭವಾಗಿ ಇಂದಿಗೆ 19 ದಿನಗಳು ಕಳೆದಿದೆ. ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಎನಿಸಿರುವ ಬಿಗ್ಬಾಸ್ ಶೋಗೆ ಸಾಗರ ಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ. ಸೀಸನ್- 11ರ ಪ್ರಸಾರವನ್ನು ಕಾಯಂ ರದ್ದುಪಡಿಸುವಂತೆ ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಬಿಗ್ ಬಾಸ್- 11ನೇ ಸೀಸನ್ ಪ್ರಸಾರವನ್ನು ಕಾಯಂ ರದ್ದುಪಡಿಸುವಂತೆ ಕೋರಿ ವಕೀಲ ಕೆ.ಎಲ್. ಭೋಜರಾಜ್ ಅವರು ಸಾಗರದ ಪ್ರಧಾನ ವ್ಯವಹಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವ್ಯವಹಾರ ಪ್ರಕ್ರಿಯಾ ಸಂಹಿತೆ ಆದೇಶ 39 ನಿಯಮ 1 ಮತ್ತು 2 ರೆಡ್ ವಿಥ್ ಸೆಕ್ಷನ್ 151ರ ಪ್ರಕಾರ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಈ ಸಂಬಂಧ ನ್ಯಾಯಾಲಯ ವಿಚಾರಣೆಯನ್ನು ಕೈಗೊಂಡಿದ್ದು ಸಿವಿಲ್ ಕಾರ್ಯವಿಧಾನದ ಕೋಡ್ ಕಾಯ್ದೆ ಅಡಿ ನೋಟಿಸ್ ಜಾರಿ ಮಾಡಲಾಗಿದೆ. ಕಲರ್ಸ್ ಕನ್ನಡ ವಾಹಿನಿಯ ನಿರ್ಮಾಪಕರು ಹಾಗೂ ಸಂಪಾದಕರಿಗೆ ತುರ್ತು ನೋಟಿಸ್ ನೀಡಲಾಗಿದೆ.
ವಕೀಲ ಕೆ.ಎಲ್. ಭೋಜರಾಜ್ ಅರ್ಜಿ ವಿಚಾರಣೆ ಅಕ್ಟೋಬರ್ 28 ರಂದು ನಡೆಯಲಿದ್ದು ವಾಹಿನಿಯವರು ಹಾಜರಾಗಬೇಕಿದೆ.
ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಮಹಿಳಾ ಆಯೋಗಕ್ಕೆ ಪತ್ರದ ಮೂಲಕ ದೂರು ವಕೀಲೆ ಒಬ್ಬರು ನೀಡಿದ್ದರು. ಇದೇ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ನರಕ-ಸ್ವರ್ಗ ಎಂಬ ಪರಿಕಲ್ಪನೆಯನ್ನು ಅರ್ಧಕ್ಕೆ ನಿಲ್ಲಿಸಿ ಎಲ್ಲಾ ಸ್ಪರ್ಧಿಗಳಿಗೂ ಒಂದೇ ಮನೆಯಲ್ಲಿರಲು ಬಿಗ್ ಬಾಸ್ ಟೀಮ್ ಅವಕಾಶ ಕಲ್ಪಿಸಿಕೊಟ್ಟಿತ್ತು.