ಡೈಲಿ ವಾರ್ತೆ: 25/OCT/2024
9/11 ಮಂಜೂರಾತಿ ಹಕ್ಕನ್ನು ಪ್ರಾಧಿಕಾರದಿಂದ ಗ್ರಾ.ಪಂ.ಗಳಿಗೆ ನೀಡುವಂತೆ ಆಗ್ರಹ; ಪ್ರತಿಭಟನೆಯ ಎಚ್ಚರಿಕೆ
ಕೋಟ,ಅ.25: ಕಂದಾಯ ಇಲಾಖೆಗೆ ಸಂಬಂಧಿಸಿದ 9/11 ಮಂಜೂರಾತಿಯ ಹಕ್ಕನ್ನು ಪ್ರಾಧಿಕಾರದಿಂದ ತೆಗೆದು ಮೊದಲಿನಂತೆ ಗ್ರಾಮ ಪಂಚಾಯತ್‌ಗೆ ನೀಡಬೇಕು ಎಂದು ಉಡುಪಿ ಜಿಲ್ಲೆಯ ವಿಶ್ವಮಾನವಾಧಿಕಾರ ಹಕ್ಕು ಲೋಕ ಪರಿಷತ್ ಸಂಘಟನೆ ಅ.24ರಂದು ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿತು.
ಭೂಪರಿವರ್ತನೆಯಾದ ಜಮೀನುಗಳಲ್ಲಿ ಈ ಹಿಂದೆ 0.25 ಸೆಂಟ್ಸ್ ತನಕ 9/11 ಮಾಡುವ ಅಧಿಕಾರವನ್ನು ಗ್ರಾ.ಪಂ.ಗೆ ನೀಡಲಾಗಿತ್ತು. ಒಂದು ಎಕರೆ ತನಕ ತಾಲೂಕು ಪಂಚಾಯತ್‌ನಿಂದ ಅನುಮೋದನೆ ಪಡೆದು ನೀಡಲಾಗುತ್ತಿತ್ತು. ಒಂದು ಎಕರೆ ಹಾಗೂ ಮೇಲ್ಪಟ್ಟ ಜಮೀನುಗಳಿಗೆ ಜಿಲ್ಲೆಯ ಗ್ರಾಮಾಂತರ ಪ್ರಾಧಿಕಾರದಿಂದ ನಕ್ಷೆಯನ್ನು ಅನುಮೋದಿಸಬೇಕಿತ್ತು. ಈ ನಿಯಮದಿಂದ 0.25 ಸೆಂಟ್ಸ್ ಒಳಗಿನ ಜಮೀನನ್ನು ಹೊಂದಿರುವವರಿಗೆ. ಚಿಕ್ಕ ಹಿಡುವಳಿದಾರರಿಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ ಬಹಳಷ್ಟು ಅನುಕೂಲವಾಗುತ್ತಿತ್ತು. ಸರಕಾರವು ಏಕಾಏಕಿ ನಿಯಮಗಳನ್ನು ಬದಲಾಯಿಸಿ ಎಲ್ಲಾ ಹಕ್ಕನ್ನು ಪ್ರಾಧಿಕಾರಕ್ಕೆ ನೀಡಿರುವುದರಿಂದ ಜನಸಾಮಾನ್ಯರಿಗೆ ಬಹಳಷ್ಟು ತೊಂದರೆಯಾಗಿದೆ. ಈ ಬಗ್ಗೆ ಸರಕಾರದ ಗಮನಸೆಳೆಯುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತದ ಕಚೇರಿಯ ಬಳಿ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ಇಕ್ಬಾಲ್ ಕುಂಜಿಬೆಟ್ಟು ತಿಳಿಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಸುವರ್ಣ ವಡ್ಡರ್ಸೆ, ಪ್ರಮುಖರಾದ ಸುಧೀರ್ ಕಾಳಾವರ, ಸಂತೋಷ್ ಅಲ್ಬಾಡಿ, ಸದಾಶಿವ ಕೋಟೆಗಾರ್, ಮಾಧವ ಸಾಲಿಗ್ರಾಮ, ದೇವೇಂದ್ರ ಗುಂಡ್ಮಿ, ಅಶೋಕ್ ಪೂಜಾರಿ ಪಾರಂಪಳ್ಳಿ, ಶ್ರೀನಿವಾಸ್ ಪುತ್ರನ್, ಮಂಜುನಾಥ ಶೇರಿಗಾರ್ ಮಾರ್ಗೋಳಿ, ಪ್ರವೀಣ್ ಕಾಳಾವರ ಇದ್ದರು.