ಡೈಲಿ ವಾರ್ತೆ: 26/OCT/2024

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ-ಶಾಸಕ ಸತೀಶ್‌ ಸೈಲ್‌ ಗೆ ಜೈಲು ಶಿಕ್ಷೆ ಪ್ರಕಟಿಸಿದ ಕೋರ್ಟ್, ಶಾಸಕ ಸ್ಥಾನ ರದ್ದು?

ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾಯ್ದಿರಿಸಿದ್ದ ಶಾಸಕ ಸತೀಶ್‌ ಸೈಲ್‌ ಸೇರಿದಂತೆ ಇತರರ ಶಿಕ್ಷೆಯ ಪ್ರಮಾಣದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶನಿವಾರ (ಅ.26) ಪ್ರಕಟಿಸಿದೆ.

ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್‌ ಸೈಲ್‌ ಅವರಿಗೆ ಮೊದಲ ಕೇಸ್‌ ಅಂದರೆ ಒಳಸಂಚು ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆ, ವಂಚನೆ ಪ್ರಕರಣದಲ್ಲಿ ಏಳು ವರ್ಷ ಶಿಕ್ಷೆ ಪ್ರಕಟವಾಗಿದೆ. ಅಲ್ಲದೆ ಕಳ್ಳತನ ಪ್ರಕರಣದಲ್ಲಿ ಮೂರು ವರ್ಷ ಜೈಲುಶಿಕ್ಷೆ ನೀಡಿ ಕೋರ್ಟ್‌ ಆದೇಶಿಸಿದೆ.

ಒಟ್ಟು ಆರು ಪ್ರಕರಣಗಳಲ್ಲಿ ಈವರೆಗೆ ವಿಧಿಸಿದ ದಂಡದ ಮೊತ್ತ 44 ಕೋಟಿ ರೂಪಾಯಿ ದಾಟಿದೆ. ಈಗ ಕಳೆದಿರುವ ಶಿಕ್ಷೆ ಪ್ರಮಾಣ ಹೊರತುಪಡಿಸಿ ಉಳಿದ ಶಿಕ್ಷೆ ಅನುಭವಿಸಬೇಕಿದೆ. ಸತೀಶ್ ಸೈಲ್‌ ಜತೆ ಮಹೇಶ್ ಬಿಳಿಯೆ, ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್ ಖಾರದಪುಡಿ ಮಹೇಶ್‌, ಮಲ್ಲಿಕಾರ್ಜುನ ಶಿಪ್ಪಿಂಗ್‌ಗೂ ಜೈಲು ಶಿಕ್ಷೆ ವಿಧಿಸಲಾಗಿದೆ.
ಸತೀಶ್‌ ಸೈಲ್‌ ಅವರಿಗೆ ಎರಡು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಪ್ರಕಟವಾದ ಕಾರಣ ಅವರ ಶಾಸಕ ಸ್ಥಾನ ರದ್ದಾಗುವ ಸಾಧ್ಯತೆಯಿದೆ.