ಡೈಲಿ ವಾರ್ತೆ: 28/OCT/2024
✍🏻 ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ.
ಜಪ್ತಿ: ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರ: ವಕೀಲರಲ್ಲಿ ಸತ್ಯ ಮುಚ್ಚಿಟ್ಟರೂ,ವೈದ್ಯರ ಬಳಿ ಅರೋಗ್ಯದ ಸತ್ಯ ಮುಚ್ಚಿಡ ಬಾರದು – ರಾಜೇಶ್ ಕಾವೇರಿ ಅಭಿಮತ
ಕುಂದಾಪುರ ತಾಲೂಕಿನ ಜಪ್ತಿ ಉಪ ಗ್ರಾಮದಲ್ಲಿ
ಕರ್ನಾಟಕ ಸರಕಾರ ದೃಷ್ಟಿ (ಪ್ರ)ದಾನ ಯೋಜನೆ 2024-25 ರನ್ವಯ, ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಬಿದ್ಕಲ್ ಕಟ್ಟೆ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಕಣ್ಣಿನ ಆಸ್ಪತ್ರೆ ಶಿರೂರು ಮುದ್ದು ಮನೆ ಹಾಗೂ
ಚೈತನ್ಯ ಯುವಕ ಸಂಘ (ರಿ) ಜಪ್ತಿ ಇವರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರವು ಜಪ್ತಿಯ ಶ್ರೀರಾಮಚಂದ್ರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚೈತನ್ಯ ಯುವಕ ಸಂಘದ ಅಧ್ಯಕ್ಷರಾದ ಶ್ರೀ ಶುಭಕರ್ ಇವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಸ್ಥಳೀಯ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಜಗದೀಶ್ ಉಡುಪ ಇವರು ನೇತ್ರ ತಪಾಸಣಾ ಶಿಬಿರವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡಿರುವ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಿದ್ದಕ್ಕಾಗಿ, ಆಯೋಜಕರನ್ನು ಅಭಿನಂದಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಬಿದ್ಕಲ್ ಕಟ್ಟೆಯ ವೈದ್ಯಾಧಿಕಾರಿಗಳಾದ ಶ್ರೀ ರಾಘವೇಂದ್ರ ಹೆಬ್ಬಾರ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಾಕಷ್ಟು ಆರೋಗ್ಯ ಸಲಹೆಗಳನ್ನು ನೀಡಿದರು. ಶಿರೂರು ಮುದ್ದು ಮನೆಯ ಪಾರ್ವತಿ ಮಹಾಬಲ ಶೆಟ್ಟಿ ಕಣ್ಣಿನ ಆಸ್ಪತ್ರೆಯ ಪ್ರತಿನಿಧಿಯಾಗಿ ಭಾಗವಹಿಸಿದ ಶ್ರೀ ಯು ಶಂಕರ್ ಶೆಟ್ಟಿಯವರು ನೇತ್ರ ತಪಾಸಣಾ ಶಿಬಿರದ ಮಹತ್ವ ಹಾಗೂ ನೇತ್ರ ತಪಾಸಣೆಗೆ ಒಳಗಾಗುವ ರೋಗಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ನೀಡುವ ಬಗ್ಗೆ ಮಹತ್ವದ ಮಾಹಿತಿಗಳನ್ನು ನೀಡಿದರು.
ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ರಾಜೇಶ್ ಕಾವೇರಿ ಮಾತನಾಡಿ, ವಕೀಲರ ಬಳಿ ಸತ್ಯವನ್ನು ಮುಚ್ಚಿಟ್ಟರೂ ವೈದ್ಯರ ಬಳಿ ಮುಚ್ಚಿಡಬಾರದು ಎಂಬ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಜಯಪ್ಪ ಹಿತ್ತಲ ಮನಿ,ಚೈತನ್ಯ ಯುವಕ ಸಂಘದ ಗೌರವಾಧ್ಯಕ್ಷರಾದ ಸುಧಾಕರ ನಾಯ್ಕ್, ನಿಕಟಪೂರ್ವ ಅಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞರಾದ ಡಾಕ್ಟರ್ ಅಭಿನಯ್ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 150 ಮಂದಿ ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದಿದ್ದು, ದೃಷ್ಟಿ ಸಮಸ್ಯೆ ಹೊಂದಿರುವ 22 ಮಂದಿಗೆ ಶಸ್ತ್ರ ಚಿಕಿತ್ಸೆಗೆ ಶಿಫಾರಸ್ಸು ಮಾಡಿದ್ದು, 68 ಮಂದಿಗೆ ಕನ್ನಡಕ ಪಡೆಯಲು ಸೂಚಿಸಲಾಯಿತು.
ಆರಂಭದಲ್ಲಿ ಚೈತನ್ಯ ಯುವಕ ಸಂಘದ ಕಾರ್ಯದರ್ಶಿ ಶ್ರೀವಿಜಯ ಶೆಟ್ಟಿಗಾರ್ ಪ್ರಾರ್ಥನೆಯೊಂದಿಗೆ ಎಲ್ಲರನ್ನೂ ಸ್ವಾಗತಿಸಿದರೆ ಶಿಕ್ಷಕರಾದ ಶ್ರೀ ಸತೀಶ ಶೆಟ್ಟಿಗಾರ್, ಜಪ್ತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.