ಡೈಲಿ ವಾರ್ತೆ: 31/OCT/2024
ನದಿಯಲ್ಲಿ ಟ್ರ್ಯಾಕ್ಟರ್ ತೊಳೆಯಲು ಹೋಗಿದ್ದ ಬಾಲಕ ಸೇರಿ ಇಬ್ಬರು ನೀರುಪಾಲು
ದಾವಣಗೆರೆ: ಟ್ರ್ಯಾಕ್ಟರ್ ತೊಳೆಯಲು ಹೋಗಿ ಇಬ್ಬರು ನೀರು ಪಾಲಾಗಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ಸಮೀಪದ ತುಂಗಭದ್ರಾ ನದಿಯಲ್ಲಿ ನಡೆದಿದೆ
ಗುತ್ತೂರು ಗ್ರಾಮದ ಹನುಮಂತಪ್ಪ (56) ಮತ್ತು 16 ವರ್ಷದ ಬಾಲಕ ಮೃತಪಟ್ಟವರೆಂದು ತಿಳಿದುಬಂದಿದೆ.
ಬಕೆಟ್ ತರಲು ಹೋಗಿ ಪ್ರಾಣಬಿಟ್ಟರು: ಟ್ರ್ಯಾಕ್ಟರ್ ತೊಳೆಯಲು ಬಕೆಟ್ ತೆಗೆದುಕೊಂಡು ಹೋಗಿದ್ದರು. ಟ್ಯಾಕ್ಟರ್ ಸ್ವಚ್ಛಗೊಳಿಸುವ ವೇಳೆ ಬಕೆಟ್ ನೀರಿನಲ್ಲಿ ತೇಲಿ ಹೋಗುತ್ತಿತ್ತು. ಆಗ 16 ವರ್ಷದ ಬಾಲಕ ಬಕೆಟ್ ಹಿಡಿಯಲು ಹೋಗಿದ್ದಾನೆ. ಆದರೆ ನೀರಿನ ರಭಸಕ್ಕೆ ಬಕೆಟ್ ಜೊತೆ ಬಾಲಕ ಕೊಚ್ಚಿಹೋಗಿದ್ದಾನೆ. ಇದನ್ನು ಗಮನಿಸಿದ ಹನುಮಂತಪ್ಪ ಅವರು ಬಾಲಕನನ್ನು ಕಾಪಾಡಲು ಹೋಗಿದ್ದಾರೆ. ಆದರೆ ದುರದೃಷ್ಟವಶಾತ್ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಮರಳಿಗಾಗಿ ನದಿಯಲ್ಲಿ ತೋಡಿದ್ದ ಗುಂಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.
ಮಾಹಿತಿ ಸಿಕ್ಕಬೆನ್ನಲ್ಲೇ ಅಗ್ನಿಶಾಮಕ ಸಿಬ್ಬಂದಿ ಹಾಗು ಸ್ಥಳೀಯರು ಸ್ಥಳಕ್ಕಾಗಮಿಸಿ, ಮರಳು ಗುಂಡಿಯಿಂದ ಇಬ್ಬರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಗ್ರಾಮಸ್ಥರು ಆಗಮಿಸಿ, ಕಂಬನಿ ಮಿಡಿದರು. ಮೃತರಿಬ್ಬರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.