ಡೈಲಿ ವಾರ್ತೆ: 05/NOV/2024
ಹಸೆಮಣೆ ಏರಬೇಕಿದ್ದ ಕಾನ್ಸ್‌ಟೇಬಲ್‌ನ ಬರ್ಬರ ಹತ್ಯೆ!
ಹಾಸನ: ಮದುವೆ ಆಮಂತ್ರಣ ಪತ್ರ ಹಂಚಿ ಮನೆಗೆ ವಾಪಸ್ ಆಗುತ್ತಿದ್ದ ಕಾನ್ಸ್‌ಟೇಬಲ್ ಭೀಕರ ಹತ್ಯೆಯಾದ ಘಟನೆ ನ. 4 ರಂದು ಸೋಮವಾರ ರಾತ್ರಿ ಹಾಸನ ತಾಲೂಕಿನ ದುದ್ದ ಸಮೀಪ ನಡೆದಿದೆ.
ಕೊಲೆಯಾದ ಕಾನ್ಸ್‌ಟೇಬಲ್ ಅರಸೀಕೆರೆ ತಾಲೂಕಿನ ಬಾಗೇಶಪುರ ಗ್ರಾಮದ ಹರೀಶ್ (32) ಎಂದು ಗುರುತಿಸಲಾಗಿದೆ.
ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಹರೀಶ್, ಇದೇ ನವೆಂಬರ್ 11ರಂದು ಮದುವೆ ನಿಶ್ಚಯವಾಗಿದ್ದ ಯುವತಿಯ ಜೊತೆ ಸಪ್ತಪದಿ ತುಳಿಯಬೇಕಿತ್ತು.
ಸೋಮವಾರ ರಾತ್ರಿ ತನ್ನ ಸ್ನೇಹಿತರಿಗೆ, ಸಂಬಂಧಿಕರಿಗೆ ಲಗ್ನಪತ್ರಿಕೆ ಕೊಟ್ಟು ಹರೀಶ್ ಮನೆಗೆ ವಾಪಸಾಗುತ್ತಿದ್ದರು. ಈ ವೇಳೆ ದುದ್ದ ಹೊರವಲಯದ ಸ್ಕೈ ಲ್ಯಾಂಡ್ ಹೋಟೆಲ್ ಸಮೀಪ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಮನಸೋಇಚ್ಛೆ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಎಸ್ಪಿ ಮಹಮದ್ ಸುಜಿತಾ ಹಾಗೂ ದುದ್ದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.