ಡೈಲಿ ವಾರ್ತೆ: 05/NOV/2024

ಉಳ್ಳಾಲ: ಅಕ್ರಮ ಮರಳು ದಂಧೆಯ ಮಾಹಿತಿ ನೀಡಿದ್ದಕ್ಕೆ ವ್ಯಕ್ತಿಗೆ ಹಲ್ಲೆ , ಇರಿಯಲು ಯತ್ನ

ಉಳ್ಳಾಲ: ಮರಳು ಧಂದೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂಬ ಆರೋಪಕ್ಕೆ ವ್ಯಕ್ತಿಗೆ ಕಬ್ಬಿಣದ ಸಲಾಕೆಯಿಂದ ಹಲ್ಲೆಗೈಯ್ದು ಚಾಕುವಿನಿಂದ ಇರಿಯಲು ಯತ್ನಿಸಿದ ಘಟನೆ ನ. 4 ರಂದು ಸೋಮವಾರ ಮಂಗಳೂರು ಹೊರವಲಯದ ಉಳ್ಳಾಲದ ಸೋಮೇಶ್ವರ ಪುರಸಭಾ ಕಚೇರಿಯ ಬಳಿ ನಡೆದಿದೆ.

ಸೋಮೇಶ್ವರ ಉಚ್ಚಿಲದ, ಫಿಶರೀಶ್ ರೋಡ್ ನಿವಾಸಿ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯ ಕಿಶೋರ್ ಎಮ್ ಉಚ್ಚಿಲ (53) ಹಲ್ಲೆಗೊಳಗಾದ ವ್ಯಕ್ತಿ.

ಉಚ್ಚಿಲ ಬಟ್ಟಪ್ಪಾಡಿ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಸುನಿಲ್ ಪೂಜಾರಿ ಹಲ್ಲೆಗೈದಿದ್ದು, ಕಿಶೋರ್ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಕಿಶೋರ್ ಅವರು ಸೋಮವಾರ ಸ್ನೇಹಿತ ಪುಷ್ಪರಾಜ್ ಎಂಬವರ ಜತೆಯಲ್ಲಿ ಸೋಮೇಶ್ವರದ ಹೊಟೇಲ್ ನಲ್ಲಿ ಚಹಾ ಕುಡಿದು ಸ್ಕೂಟರ್ ನಲ್ಲಿ ಸಹ ಸವಾರನಾಗಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಸೋಮೇಶ್ವರ ಪುರಸಭಾ ಕಚೇರಿ ಬಳಿ ಸುನಿಲ್ ಪೂಜಾರಿ ಸ್ಕೂಟರ್ ತಡೆದು ಮರಳುಗಾರಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತೀಯ ಎಂದು ಕೊಲೆ ಬೆದರಿಕೆ ನೀಡಿದ್ದು, ಭುಜ ಮತ್ತು ಸೊಂಟಕ್ಕೆ ಹಲ್ಲೆ ನಡೆಸಿದ್ದಾನೆ.
ಬಳಿಕ ಸೊಂಟದಿಂದ ಚಾಕು ಹೊರ ತೆಗೆದು ಇರಿಯಲು ಮುಂದಾಗಿದ್ದಾನೆ.
ಈ ವೇಳೆ ಸ್ನೇಹಿತ ಪುಷ್ಪರಾಜ್ ಅವರು ಸ್ಕೂಟರನ್ಬು ವೇಗವಾಗಿ ಚಲಾಯಿಸಿದರ ಪರಿಣಾಮ ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆಂದು ಹಲ್ಲೆಗೊಳಗಾದ ಕಿಶೋರ್ ದೂರಿನಲ್ಲಿ ತಿಳಿಸಿದ್ದಾರೆ.

ಉಚ್ಚಿಲ ಬಟ್ಟಂಪಾಡಿ ಪ್ರದೇಶದಲ್ಲಿ ತಿಂಗಳುಗಳ ಹಿಂದೆ ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಿ ಅಪಾರ ಪ್ರಮಾಣದ ಮರಳನ್ನ ವಶಪಡಿಸಿದ್ದು, ಆ ಪ್ರಕರಣದಲ್ಲಿ ಮರಳುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಸುನಿಲ್ ಪೂಜಾರಿ ವಿರುದ್ಧವೂ ಪ್ರಕರಣ ದಾಖಲಾಗಿತ್ತು.
ಉಳ್ಳಾಲ ಠಾಣೆಯಲ್ಲಿ ಆರೋಪಿ ಸುನಿಲ್ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ.