ಡೈಲಿ ವಾರ್ತೆ: 09/NOV/2024

ಭದ್ರತೆ ಸಿಬ್ಬಂದಿಯಿಂದ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ – 15 ಕೋಟಿ ಮೌಲ್ಯದ ಚಿನ್ನಾಭರಣ ನಗದು ದೋಚಿ ಪರಾರಿ!

ಬೆಂಗಳೂರು: ಚಿನ್ನದ ವ್ಯಾಪಾರಿ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿ ನಗದು, ಚಿನ್ನಾಭರಣ ಸೇರಿದಂತೆ ಬರೋಬ್ಬರಿ 15.15 ಕೋಟಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅರಿಹಂತ್​ ​ಜ್ಯುವೆಲ್ಲರ್ಸ್​ ​​ಮಾಲೀಕ ಸುರೇಂದ್ರ ಕುಮಾರ್​ ಜೈನ್​​​​ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ನೇಪಾಳ ಮೂಲದ ನಮ್ರಾಜ್​ ಎಂಬಾತನ ವಿರುದ್ಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರೇಂದ್ರ ಕುಮಾರ್ ಜೈನ್ ಅವರ ಅರಿಹಂತ್ ಜ್ಯುವೆಲ್ಲರ್ಸ್​ ಶಾಪ್​ನಲ್ಲಿ ನೇಪಾಳ ಮೂಲದ ನಮ್ರಾಜ್ 6 ತಿಂಗಳಿನಿಂದ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ. ಉಳಿದುಕೊಳ್ಳಲು ಮನೆ ವ್ಯವಸ್ಥೆ ಇರದ ನಮ್ರಾಜ್​ನಿಗೆ ಸುರೇಂದ್ರ ಕುಮಾರ್​ ಜೈನ್ ತಮ್ಮದೇ ಮನೆಯಲ್ಲಿ ಒಂದು ರೂಮ್ ಸಹ ನೀಡಿದ್ದರು.

ಸೆಕ್ಯೂರಿಟಿ ಗಾರ್ಡ್ ಕೆಲಸದ ಜೊತೆಗೆ ಸುರೇಂದ್ರ ಕುಮಾರ್ ಜೈನ್​ ಅವರ ಮನೆಯ ಗಾರ್ಡನ್‌ನಲ್ಲಿ ಗಿಡಗಳಿಗೆ ನೀರು ಹಾಕುವುದು ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ನಮ್ರಾಜ್ ಮಾಡಿಕೊಂಡಿದ್ದ. ನವೆಂಬರ್ 1ರಂದು ಜಾತ್ರೆಯ ನಿಮಿತ್ತ ಸುರೇಂದ್ರ ಕುಮಾರ್​ ಜೈನ್​ ಅವರ ಕುಟುಂಬ ಗುಜರಾತ್‌ನ ಗಿರ್ನಾರಿಗೆ ತೆರಳಿತ್ತು.

ಈ ವೇಳೆ ಮನೆಯಲ್ಲಿದ್ದ ಚಿನ್ನಾಭರಣ ನಗದು ಸೇರಿದಂತೆ ಸುಮಾರು 15.15 ಕೋಟಿ ಮೌಲ್ಯದ ವಸ್ತುಗಳನ್ನು ದೋಚಿರುವ ನಮ್ರಾಜ್ ಪರಾರಿಯಾಗಿದ್ದಾನೆ. ನವೆಂಬರ್ 7ರಂದು ಸುರೇಂದ್ರ ಕುಮಾರ್ ಜೈನ್​ ಅವರ ಕುಟುಂಬ ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ತಕ್ಷಣ ವಿಜಯನಗರ ಪೊಲೀಸ್ ಠಾಣೆಗೆ ಸುರೇಂದ್ರ ಕುಮಾರ್​ ಜೈನ್ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್​ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ಹುಡುಕಾಟ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.