ಡೈಲಿ ವಾರ್ತೆ: 09/NOV/2024
ಸಾಸ್ತಾನ ಟೋಲ್ ಸಮಸ್ಯೆ ವಿರುದ್ಧ ಪ್ರತಿಭಟನೆ – ಶೀಘ್ರ ಪರಿಹಾರ ಸಿಗದೇ ಇದ್ದಲ್ಲಿ ಟೋಲ್ ಬಂದ್ ಗೆ ಎಚ್ಚರಿಕೆ!
ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉರಿಯದ ದಾರಿದೀಪ, ಸಂಪೂರ್ಣ ಹದೆಗೆಟ್ಟಿರುವ ಹೊಂಡಗಳಿಂದ ತುಂಬಿರುವ ಹೆದ್ದಾರಿ ಟೋಲ್ ರಸ್ತೆ, ಪಾದಾಚಾರಿ ಮಾರ್ಗ, ಸರ್ವಿಸ್ ರಸ್ತೆಯ ಅವ್ಯವಸ್ಥೆ, ಸ್ಥಳೀಯ ಸಂಘ ಸಂಸ್ಥೆಗಳ ಮತ್ತು ಶಾಲಾ ವಾಹನಗಳಿಗೆ ವಿಧಿಸುತ್ತಿರುವ ಸುಂಕ ಮುಂತಾದ ಸಮಸ್ಯೆಗಳನ್ನು ಖಂಡಿಸಿ ಶನಿವಾರ ಸಂಜೆ ಸ್ಥಳೀಯರು ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಸಂಸ್ಥೆಯ ಹೆಸರಿನಲ್ಲಿ ನೋಂದಾಯಿತ ವಾಹನಗಳಿಗೆ ಟೋಲ್ ವಿಧಿಸುವ ನೆಪದಲ್ಲಿ ಸ್ಥಳೀಯ ಶಾಲೆಗಳ ವಾಹನಕ್ಕೆ ಹಾಗೂ ಸ್ಥಳೀಯ ಕೆಲವು ಉದ್ಯಮಗಳ ವಾಹನಗಳಿಗೆ ಟೋಲ್ ವಿಧಿಸುವುದನ್ನು ನಿಲ್ಲಿಸಬೇಕು. ಹೆದ್ದಾರಿಯ ಬದಿಯಲ್ಲಿ ಮಳೆಗಾಲದಲ್ಲಿ ಆಗಿರುವ ಹೊಂಡಗಳನ್ನು ಕೂಡಲೇ ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಬ್ರಹ್ಮಾವರದ ವೃತ್ತ ನಿರೀಕ್ಷಕರಾದ ದಿವಾಕರ್ ಅವರು ಪ್ರತಿಭಟನಾಕಾರರ ಮನವೊಲಿಸಿ ನ. 11ರಂದು ಸೋಮವಾರ ಬ್ರಹ್ಮಾವರ ತಹಶೀಲ್ದಾರ್ ಅವರ ಕಚೇರಿಯಲ್ಲಿ ಟೋಲ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಸ್ಥಗಿತಗೊಳಿಸಿದರು.
ಈ ಸಂದರ್ಭ ಮಾತನಾಡಿದ ಹೆದ್ದಾರಿ ಜಾಗೃತಿ ಸಮಿತಿಯ ಶ್ಯಾಮಸುಂದರ ನಾಯರಿ ಸೋಮವಾರ ಟೋಲ್ ಸಮಸ್ಯೆಗಳಿಗೆ ಯಾವುದೇ ಪರಿಹಾರ ಸಿಗದೇ ಇದ್ದಲ್ಲಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು. ಸಾಸ್ತಾನ ಗುಂಡ್ಮಿಯಲ್ಲಿರುವ ಅನಧಿಕೃತವಾದ ಟೋಲ್ ವ್ಯವಸ್ಥೆ ಇರಬಾರದು. ಆ ಮಟ್ಟದ ಹೋರಾಟ ನಡೆಸಲಿದ್ದೇವೆ. ಹಿಂದೆ ಇದ್ದ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಮಿತಿಯ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ಸಂತ ಅಂತೋನಿ ಚರ್ಚಿನ ಧರ್ಮಗುರು ವಂ|ಸುನೀಲ್ ಡಿಸಿಲ್ವಾ, ಸೀರಿಯನ್ ಚರ್ಚಿನ ಧರ್ಮಗುರು ವಂ|ಡೇವಿಡ್ ಕ್ರಾಸ್ತಾ, ಹೋರಾಟ ಸಮಿತಿಯ ಪ್ರಮುಖರಾದ ಆಲ್ವಿನ್ ಅಂದ್ರಾದೆ, ನಾಗರಾಜ್ ಗಾಣಿಗ, ಡೆನಿಸ್ ಡಿಸೋಜಾ, ಪಂಚಾಯತ್ ಸದಸ್ಯರಾದ ಚಂದ್ರ ಮೋಹನ್, ವಾಹನ ಚಾಲಕರು ಮತ್ತು ಮ್ಹಾಲಕರ ಸಂಘದ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬ್ರಹ್ಮಾವರ ವೃತ್ತ ನಿರೀಕ್ಷಕರಾದ ದಿವಾಕರ್ ಅವರು ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಾಗೆ ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಬ್ರಹ್ಮಾವರ ಠಾಣಾಧಿಕಾರಿ ಮಧು ಬಿಇ, ಕ್ರೈಂ ಎಸ್ಐ ತೇಜಸ್ವಿ, ಕೋಟ ಎಸ್ಐ ಸುಧಾ ಪ್ರಭು, ಎಎಸ್ಐ ಜಯಪ್ರಕಾಶ್ ಹಾಗೂ ಪೊಲೀಸ್ ಸಿಬಂದಿಗಳು ಸ್ಥಳದಲ್ಲಿದ್ದರು.