ಡೈಲಿ ವಾರ್ತೆ: 11/NOV/2024
ಗೆಳತಿಯ ದೂರ ಮಾಡಿ ವಿದೇಶಕ್ಕೆ ಕಳಿಸಿದ ಕೋಪಕ್ಕೆ ಯುವತಿ ತಂದೆ ಮೇಲೆ ಯುವಕನಿಂದ ಗುಂಡಿನ ದಾಳಿ
ಹೈದರಾಬಾದ್: ಗೆಳತಿಯ ತಂದೆಯ ಮೇಲೆ ಯುವಕನೋರ್ವ ಏರ್ಗನ್ನಿಂದ ಗುಂಡಿನ ದಾಳಿ ನಡೆಸಿದ ಘಟನೆ ಹೈದರಾಬಾದ್ನಲ್ಲಿ ಭಾನುವಾರ ನಡೆದಿದೆ. ಆರೋಪಿ ಯುವಕನಿಂದ ದೂರ ಮಾಡಲು ತನ್ನ ಮಗಳನ್ನು ತಂದೆ ವಿದೇಶಕ್ಕೆ ಕಳುಹಿಸಿದ್ದರು. ಇದೇ ಕೋಪದಲ್ಲಿ ಯುವಕ, ಸ್ನೇಹಿತೆಯ ತಂದೆ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
25 ವರ್ಷದ ಆರೋಪಿ ಯುವಕನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. 57 ವರ್ಷದ ವ್ಯಕ್ತಿಯ ಬಲಗಣ್ಣಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ವ್ಯಕ್ತಿಯ ಮಗಳು ಮತ್ತು ಆರೋಪಿ ಸಹಪಾಠಿಗಳಾಗಿದ್ದರು. ಹೈದರಾಬಾದ್ನ ಸರೂರ್ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಸೆಕ್ಷನ್ 109 (ಕೊಲೆ ಯತ್ನ), ಬಿಎನ್ಎಸ್ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಅಡಿ ಗಾಯಾಳು ವ್ಯಕ್ತಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರೀತಿಸುವಂತೆ ನನ್ನ ಮಗಳಿಗೆ ಯುವಕ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ. ಇದರಿಂದಾಗಿ ಆತನಿಗೆ ಎಚ್ಚರಿಕೆ ನೀಡಿ, ಜಗಳವಾಡಿದ್ದೆ ಎಂದು ದೂರಿನಲ್ಲಿ ಯುವತಿಯ ತಂದೆ ಆರೋಪಿಸಿದ್ದಾರೆ. ತನ್ನ ಮಗಳನ್ನು ಭೇಟಿಯಾಗದಂತೆ ತಿಳಿಸಿದ್ದಕ್ಕೆ ಕೊಲ್ಲುವುದಾಗಿ ಯುವತಿಯ ತಂದೆಗೆ ಬೆದರಿಕೆ ಹಾಕಿದ್ದ. ಬಳಿಕ ಆತನ ಪೋಷಕರ ಮುಂದೆಯೂ ಆತನಿಗೆ ಬುದ್ಧಿಮಾತು ಹೇಳಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ತನ್ನ ಮಗಳನ್ನು ಇವರು ಅಮೆರಿಕಕ್ಕೆ ಕಳುಹಿಸಿದ್ದರು. ಇದೇ ಸಿಟ್ಟಿನಲ್ಲಿ ಯುವಕ ಅಪಾರ್ಟ್ಮೆಂಟ್ಗೆ ಬಂದು, ಕಾರು ಪಾರ್ಕಿಂಗ್ ಮಾಡುತ್ತಿದ್ದ ಯುವತಿಯ ತಂದೆಯ ಮೇಲೆ ಏರ್ಗನ್ ಮೂಲಕ ಒಂದು ಸುತ್ತು ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರಿನ ಗ್ಲಾಸ್ ಒಡೆದು ದಾಳಿ ಮಾಡಿದ್ದು, ಯುವತಿಯ ತಂದೆ ಅಪಾಯದಿಂದ ಪಾರಾಗಿದ್ದಾರೆ. ಘಟನೆ ಬಳಿಕ ಆರೋಪಿ ದ್ವಿಚಕ್ರ ವಾಹನದಲ್ಲಿ ಸ್ಥಳದಿಂದ ಪರಾರಿಯಾಗಿದ್ದ. ಪ್ರಕರಣ ದಾಖಲಾದ ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.