ಡೈಲಿ ವಾರ್ತೆ: 14/NOV/2024
ವೈದ್ಯನಿಗೆ ರೋಗಿಯ ಮಗನಿಂದ ಚಾಕು ಇರಿತ – ವೈದ್ಯ ಗಂಭೀರ ಗಾಯ
ಚನ್ನೈ: ಕ್ಯಾನ್ಸರ್ ರೋಗಿಯೊಬ್ಬರ ಪುತ್ರ ತನ್ನ ತಾಯಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಚಾಕುವಿನಿಂದ ಏಳು ಬಾರಿ ಇರಿದಿರುವ ಘಟನೆ ನ. 13 ರಂದು ಬುಧವಾರ ಚೆನ್ನೈನಲ್ಲಿ ನಡೆದಿದೆ.
ನಗರದ ಕಲೈಗ್ನರ್ ಶತಮಾನೋತ್ಸವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ.
ಗಂಭೀರವಾಗಿ ಗಾಯಗೊಂಡಿರುವ ವೈದ್ಯ ಬಾಲಾಜಿ ಜಗನ್ನಾಥ್ ಅವರನ್ನು ತೀವ್ರ ನಿಗಾ ಘಟಕ (ಐಸಿಯು) ದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತನ್ನ ತಾಯಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು 26 ವರ್ಷದ ವಿಘ್ನೇಶ್ವರನ್ ಎಂಬಾತ ಚಾಕುವಿನಿಂದ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ. ಈತನ ಜೊತೆ ಇತರ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಬುಧವಾರ ಬೆಳಿಗ್ಗೆ 10.30ರ ಸುಮಾರಿಗೆ ವೈದ್ಯ ಜಗನ್ನಾಥ್ ಅವರು ಆಸ್ಪತ್ರೆಯ ಕ್ಯಾನ್ಸರ್ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ವೇಳೆ, ಅಲ್ಲಿಗೆ ಬಂದ ವಿಘ್ನೇಶ್ ಮತ್ತು ಆತನ ಮೂವರು ಗೆಳೆಯರು “ಕ್ಯಾನ್ಸರ್ ರೋಗಿಯಾಗಿರುವ ವಿಘ್ನೇಶ್ ತಾಯಿಯ ಸ್ಥಿತಿ ಹದೆಗೆಟ್ಟಿರುವ ಕುರಿತು ವೈದ್ಯನೊಂದಿಗೆ ವಾಗ್ವಾದ ನಡೆಸಿದ್ದಾರೆ. ವೈದ್ಯ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.
ಈ ವೇಳೆ ವಿಘ್ನೇಶ್ ಏಕಾಏಕಿ ಚಾಕು ತೆಗೆದು ವೈದ್ಯ ಜಗನ್ನಾಥ್ ಅವರ ಕುತ್ತಿಗೆ, ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಇರಿದಿದ್ದಾನೆ. ಇದನ್ನು ಗಮನಿಸಿ ಧಾವಿಸಿ ಬಂದ ಆಸ್ಪತ್ರೆ ಸಿಬ್ಬಂದಿ ಮತ್ತು ಇತರರು, ಜಗನ್ನಾಥ್ ಅವರನ್ನು ತಕ್ಷಣ ಚಿಕಿತ್ಸೆ ದಾಖಲಿಸಿದ್ದಾರೆ.
“ನಾವು ತಕ್ಷಣ ಜಗನ್ನಾಥ್ ಅವರನ್ನು ಆಪರೇಷನ್ ಥಿಯೇಟರ್‌ಗೆ ಕರೆದೊಯ್ದಿದೆವು. ಅಲ್ಲಿ ಹೃದಯ ಮತ್ತು ನರ-ಶಸ್ತ್ರಚಿಕಿತ್ಸಾ ವಿಭಾಗಗಳ ತಜ್ಞರ ತಂಡವು ಅವರಿಗೆ ಶಸ್ತ್ರಚಿಕಿತ್ಸೆ ಮಾಡಿತು. ಇದರಿಂದ ಜಗನ್ನಾಥ್ ಅವರು ಅಪಾಯದಿಂದ ಪಾರಾಗಿದ್ದಾರೆ. ಅವರ ಸ್ಥಿತಿ ಈಗ ಸ್ಥಿರವಾಗಿದೆ” ಎಂದು ಆಸ್ಪತ್ರೆಯ ನಿರ್ದೇಶಕ ಎಲ್ ಪಾರ್ಥಸಾರಥಿ ತಿಳಿಸಿದ್ದಾರೆ.
ವೈದ್ಯನ ಮೇಲಿನ ದಾಳಿಯು ತಮಿಳುನಾಡು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು, ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಮತ್ತು ಆರೋಗ್ಯ ಸಚಿವ ಸುಬ್ರಮಣಿಯನ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯನ ಆರೋಗ್ಯ ವಿಚಾರಿಸಿದ್ದಾರೆ.