ಡೈಲಿ ವಾರ್ತೆ: 14/NOV/2024

ವಿದ್ಯಾರ್ಥಿನಿಗೆ ಬಾಸುಂಡೆ ಬರುವಂತೆ ಹೊಡೆದ ಪ್ರಾಂಶುಪಾಲೆ, ಪೋಷಕರ ಆಕ್ರೋಶ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಖಾಸಗಿ ಶಾಲೆಯ ಪ್ರಾಂಶುಪಾಲೆ ವಿದ್ಯಾರ್ಥಿನಿಗೆ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.

ವಿಶೇಷ ಚೇತನ ವಿದ್ಯಾರ್ಥಿಯ ಸಹಾಯಕ್ಕೆ ಧಾವಿಸಲಿಲ್ಲ ಅಂತ ಪ್ರಾಂಶುಪಾಲೆ ಉಷಾ ಕಿರಣ್ ವಿದ್ಯಾರ್ಥಿನಿಗೆ ಬೆತ್ತದಿಂದ ಕೈ ಮತ್ತು ಕಾಲುಗಳ ಮೇಲೆ‌ ಬಾಸುಂಡೆ ಬರುವಂತೆ ಹೊಡೆದಿದ್ದಾರೆ.
ಮಗಳಿಗೆ ಹಿಗ್ಗಾಮುಗ್ಗ ಹೊಡೆದಿರುವುದನ್ನು ಖಂಡಿಸಿ ಪ್ರಾಂಶುಪಾಲೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ವಿಜಯಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಕರಣ ಸಂಬಂಧ ಪ್ರಾಂಶುಪಾಲೆ ಉಷಾ ಕಿರಣ್ ಮಾತನಾಡಿ, ತರಗತಿಯಲ್ಲಿ ನಡೆಯಲು ಆಗದ ವಿಶೇಷ ಚೇತನ ಮಗು ಇದೆ. ವಿಶೇಷ ಚೇತನ ಮಗುವಿನ ಬಳಿ ಯಾರು ಹೋಗಬಾರದು, ಮಾತನಾಡಬಾರದು ಅಂತ ಕೆಲ ಮಕ್ಕಳು ಹೇಳುತ್ತಿದ್ದರಂತೆ. ಆ ಮಗುವಿಗೆ ಸಹಾಯಕ್ಕೆ ಆಯಾ ಇದ್ದಾರೆ. ಆದರೆ ಕೆಲವೊಮ್ಮೆ ಮಕ್ಕಳ ಸಹಾಯ ಬೇಕಾಗುತ್ತದೆ. ಮಗುವಿನ ಸಹಾಯಕ್ಕೆ ಕರೆದಾಗ “ನಾವು ಆಳುಗಳಾ” ಎಂದು ಇತರ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಇದೇ ರೀತಿ ನಡೆಯುತ್ತಿದ್ದು, ನಿನ್ನೆಯೂ ಹೀಗೆ ಆಗಿದೆ. ಹೀಗಾಗಿ, ನಾನು ಆ ಮಗುವಿನ ಕೈ ಮತ್ತು ಕಾಲಿಗೆ ಹೊಡೆದಿದ್ದೇನೆ. ನಾನು ಆ ರೀತಿ ಹೊಡೆಯಬಾರದಿತ್ತು ತಪ್ಪಾಗಿದೆ. ವಿಶೇಷಚೇತನ ಮಗುವಿಗೆ ಹೀಗಾಗುತ್ತಿದೆ ಅಂತ ಹೊಡೆದೆ. ವಿದ್ಯಾರ್ಥಿನಿಯ ಪೋಷಕರಿಗೆ ನಾನು ಹೇಳಬೇಕಿತ್ತು, ಆದರೆ ಆ ಕ್ಷಣದಲ್ಲಿ ಆ ರೀತಿ ಮಾಡಿದ್ದೇನೆ ಎಂದು ವಿಷಾಧ ವ್ಯಕ್ತಪಡಿಸಿದರು.