ಡೈಲಿ ವಾರ್ತೆ: 25/NOV/2024
ಇಂದಿನಿಂದ ಬಿಪಿಎಲ್ ಕಾರ್ಡ್ ಪರಿಶೀಲನೆ, ಅನರ್ಹರ ಕಾರ್ಡ್‌ಗಳಿಗೆ ಕತ್ತರಿ: ಪ್ರಕ್ರಿಯೆ ಹೇಗೆಂಬ ವಿವರ ಇಲ್ಲಿದೆ
ಬೆಂಗಳೂರು: ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಗಳ ರದ್ದು ವಿಚಾರ ಬಿರುಗಾಳಿಯನ್ನೇ ಎಬ್ಬಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಅರ್ಹರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡದಂತೆ ಈಗಾಗಲೇ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದರು. ಅಷ್ಟೇ ಅಲ್ಲ, ಒಂದು ವೇಳೆ ಅರ್ಹರ ಫಲಾನುಭವಿಗಳ ಕಾರ್ಡ್ ರದ್ದುಗೊಂಡಿದ್ದರೆ ಮತ್ತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಆಹಾರ ಇಲಾಖೆ ಪಡಿತರ ಚೀಟಿಗಳ ಪರಿಷ್ಕರಣೆ ಮತ್ತು ತಿದ್ದುಪಡಿ ಆರಂಭಿಸುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ರದ್ದಾಗಿರುವ ಬಿಪಿಎಲ್ ಕಾರ್ಡ್ ಗಳ ತಿದ್ದುಪಡಿ ಕಾರ್ಯ ನಡೆಯಲಿದೆ. ಆಧಾರ್ ಪ್ಯಾನ್ ಕಾರ್ಡ್, ಐಟಿ ರಶೀದಿ ಮೂಲಕ ಅರ್ಹತೆ ಹೊಂದಿರುವವರು ಕಾರ್ಡ್ ಗಳನ್ನ ಸರಿ ಪಡಿಸಿಕೊಳ್ಳಬಹುದಾಗಿದೆ.
ಬಿಪಿಎಲ್ ಕಾರ್ಡ್ ತಿದ್ದುಪಡಿ ಹೇಗೆ? ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು. ಸರ್ಕಾರಿ ನೌಕರರ, ತೆರಿಗೆ ಪಾವತಿದಾರರ ಅನ್ನೋದನ್ನು ಪರಿಶೀಲಿಸಬೇಕು. ಕಾರ್ಡ್ ಹೊಂದಿರುವವರು ಬಡವರು ಇದ್ದಾರಾ? ಶ್ರೀಮಂತರು ಇದ್ದಾರಾ? ಅಂತ ಮನೆ ಪರಿಶೀಲಿಸಬೇಕು. ಆರ್ ಡಿ ನಂಬರ್ ಪರಿಶೀಲನೆ ಮಾಡಬೇಕು. ಸ್ಥಳ ಪರಿಶೀಲನೆ ಜೊತೆಗೆ ದಾಖಲೆ ಪರಿಶೀಲನೆ ಮಾಡಬೇಕು. ಹೀಗೆ ಆಹಾರ ನಿರೀಕ್ಷಕರು ಒನ್ ಬೈ ಒನ್ ಆಗಿ ಕಾರ್ಡ್ ಗಳನ್ನು ಪರಿವರ್ತನೆ ಮಾಡಬೇಕಿದೆ. ಏಕಾಏಕಿ ಮೂಲ ಸ್ಥಾನಕ್ಕೆ ಶಿಫ್ಟ್ ಮಾಡಲು ಆಗಲ್ಲ. ಎನ್‌ಐಸಿ ಸಾಫ್ಟ್ ವೇರ್ ಮೂಲಕ ಕಾರ್ಡ್ ಕನ್ವರ್ಟ್ ಮಾಡಬೇಕು. ಕಾರ್ಡ್ ಬದಲಿಸಲು ಕನಿಷ್ಠ 10 ರಿಂದ 15 ದಿನ ಸಮಯಾವಕಾಶ ಬೇಕಾಗುತ್ತದೆ.