ಡೈಲಿ ವಾರ್ತೆ:01/DEC/2024

ಬೆಳ್ವೆ: ನದಿಗೆ ಕಾಲುಜಾರಿ ಬಿದ್ದು ಇಬ್ಬರು ಬಾಲಕರು ನೀರುಪಾಲು

ಕುಂದಾಪುರ:ಬಾಲಕರಿವರು ಕಾಲುಜಾರಿ ನದಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಡಿ. 1 ರಂದು ಭಾನುವಾರ ಮಧ್ಯಾಹ್ನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ವೆಯಲ್ಲಿ ನಡೆದಿದೆ.

ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ ಬಾಲಕರು ಬೆಳ್ವೆ ಶ್ರೀಧರ ಆಚಾರ್ಯ ಅವರ ಪುತ್ರ ಶ್ರೀಶ ಆಚಾರ್ಯ (14), ಗುಮ್ಮಾಲ ರಾಮ ನಾಯ್ಕ್ ಅವರ ಪುತ್ರ ಜಯಂತ್ ನಾಯ್ಕ್ (19) ಎಂದು ಗುರುತಿಸಲಾಗಿದೆ.

ಇವರು ಸ್ನೇಹಿತರೊಂದಿಗೆ ಗುಮ್ಮಾಲ ಬಳಿ ಇರುವ ಸೀತಾನದಿಗೆ ಹೋಗಿದ್ದರು. ಶ್ರೀಶ ಆಚಾರ್ಯ ಬಂಡೆಮೇಲಿಂದ ಕಾಲುಜಾರಿ ನದಿಗೆ ಬಿದ್ದಿದ್ದು ಆತನನ್ನು ಹಿಡಿಯಲು ಹೋದ ಜಯಂತ್ ನಾಯ್ಕ್ ಕೂಡ ನೀರಿಗೆ ಬಿದ್ದು ಇಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ.

ತಕ್ಷಣ ಜೊತೆಗಿದ್ದ ಸ್ನೇಹಿತರು ಸ್ಥಳೀಯರಿಗೆ ಮಾಹಿತಿ ನೀಡಿದ್ದು ಸ್ಥಳೀಯರಾದ ನಾಗರಾಜ ಹಾಗೂ ಚೋಣ ರವರು ನದಿಗೆ ಹಾರಿ ಇಬ್ಬರು ಬಾಲಕರನ್ನು ನದಿಯಿಂದ ಮೇಲಕ್ಕೆ ಎತ್ತಿ ತಂದಿದ್ದಾರೆ. ಆದರೆ ಅಷ್ಟರಲ್ಲೇ ಇಬ್ಬರು ಬಾಲಕರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಶ್ರೀಶ ಆಚಾರ್ಯ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಜಯಂತ್ ನಾಯ್ಕ್ ಮಂದಾರ್ತಿ ಮೇಳದ ಯಕ್ಷಗಾನ ಕಲಾವಿದ ಎಂದು ತಿಳಿದು ಬಂದಿದೆ.
ಇವರು ಭಜನೆ ಟೀಮ್ ನಲ್ಲಿ ಒಟ್ಟಿಗೆ ಇದ್ದವರು ಎಂದು ತಿಳಿಯಲಾಗಿದೆ.

ಶಂಕರನಾರಾಯಣ ಪೊಲೀಸ್ ಠಾಣಾಧಿಕಾರಿ ನಾಸಿರ್ ಹುಸೇನ್, ಎಸ್ಐ ಶಂಭುಲಿಂಗ ಹಾಗೂ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸ್ಥಳಕ್ಕಾಗಮಿಸಿದ್ದರು.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಳ್ವೆ ಶವಗಾರಕ್ಕೆ ಸಾಗಿಸಲಾಗಿದೆ.