ಡೈಲಿ ವಾರ್ತೆ:02/DEC/2024
ಕೋಡಿ ಬ್ಯಾರೀಸ್ ನಲ್ಲಿ 37 ನೇ ‘ಸ್ವಚ್ಛ ಕಡಲತೀರ – ಹಸಿರು ಕೋಡಿ’ ಅಭಿಯಾನ
ಕುಂದಾಪುರ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ, ಇದರ 37 ನೇ ‘ಸ್ವಚ್ಛ ಕಡಲತೀರ – ಹಸಿರು ಕೋಡಿ’ ಅಭಿಯಾನವು ದಿನಾಂಕ 01-12-2024 ರಂದು ಯಶಸ್ವಿಯಾಗಿ ನಡೆಯಿತು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸೈಯದ್ ಮೊಹಮ್ಮದ್ ಬ್ಯಾರಿ ಇವರು ಅಭಿಯಾನವನ್ನುದ್ದೇಶಿಸಿ “ಭಗವಂತನಿಗೆ ಪ್ರೀತಿಪೂರ್ವಕವಾದ ಈ ಕಾಯಕವು ನಿರಂತರವಾಗಿ ಸಾಗಬೇಕಾದದ್ದು ಮಾತ್ರವಲ್ಲದೆ, ಮಾಡುವ ಕೆಲಸದಲ್ಲೂ ಪರಿವರ್ತನೆಯಾಗಬೇಕು: ಪ್ರಸಾದ ನೀಡುವ ಅರ್ಚಕನಿಗಿಂತ, ಪ್ರಸಾದ ಸ್ವೀಕರಿಸುವ ಭಕ್ತನಿಗೆ ಹೇಗೆ ಪ್ರಸಾಧದ ಕುರಿತು ಹೆಚ್ಚು ಭಕ್ತಿಗೌರವವಿರುತ್ತದೋ ಹಾಗೆಯೇ ನಮ್ಮಲ್ಲೂ ಈ ಪರಿಸರದ ಕುರಿತು ಮಾಡುವ ಸೇವೆಯಲ್ಲಿ ಭಕ್ತಿಗೌರವ ಇರಬೇಕು. ಪ್ರತಿ ತಿಂಗಳು ಈ ಕಾಯಕವನ್ನು ಹಮ್ಮಿಕೊಳ್ಳುವುದರೊಂದಿಗೆ ಪರಿಸರ ಸ್ವಚ್ಛತೆಯ ಮಹತ್ವದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸಾಧ್ಯ ಹಾಗಾಗಿ ನಾವು ಮಾಡುವ ಈ ಅಭಿಯಾನ ಮುಂದಿನ ದಿನಗಳಲ್ಲಿ ವಿಭಿನ್ನವಾಗಿ ನಡೆಯಬೇಕು” ಎಂದು ನುಡಿದರು.
ಪ್ರತಿ ತಿಂಗಳ ಕೊನೆಯ ಭಾನುವಾರದಂದು ನಡೆಯುತ್ತಿದ್ದ ಈ ಅಭಿಯಾನವನ್ನು ಈ ತಿಂಗಳಿಂದ ಮೊದಲ ಭಾನುವಾರದಂದು ಮಾಡಲು ಸಂಚಾಲಕರು ತಿಳಿಸಿದರು.
ಈ ಸಂದರ್ಭದಲ್ಲಿ “ಗರ್ಲ್ ಲೀಡ್ ಆಕ್ಷನ್ ಆನ್ ಕ್ಲೈಮೇಟ್ ಚೇಂಜ್ ಅಡ್ವೊಕೆಸಿ ಚಾಂಪಿಯನ್” ನ ಭಾಗವಾಗಿ ಯುರೋಪ್ ನ ಅಝೆರ್ಬೈಜನ್ ನಲ್ಲಿ ಹವಾಮಾನ ಬದಲಾವಣೆಯ ಕುರಿತು ನಡೆದ ವಿಶ್ವ ಸಮ್ಮೇಳನದಲ್ಲಿ ‘ವರ್ಲ್ಡ್ ಗರ್ಲ್ ಸ್ಕೌಟ್ಸ್ ಆಂಡ್ ಗರ್ಲ್ ಗೈಡ್ಸ್’ ಅನ್ನು ಏಷ್ಯಾ ಪೆಸಿಫಿಕ್ ನ ಏಕೈಕ ಪ್ರತಿನಿಧಿಯಾಗಿ ಪ್ರತಿನಿಧಿಸಿ ಸಾಧನೆಗೈಯ್ದ ಬ್ಯಾರೀಸ್ ಬಿ.ಎಡ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಶರ್ಮಿನ್ ಬಾನು ಇವರನ್ನು ‘ಸ್ವಚ್ಛ ಕಡಲತೀರ-ಹಸಿರು ಕೋಡಿ’ ಅಭಿಯಾನದ ರಾಯಭಾರಿಯಾಗಿ ಸಂಚಾಲಕರು ಘೋಷಿಸಿದರು.
ಬ್ಯಾರೀಸ್ ವಿಶ್ವಸ್ಥ ಮಂಡಳಿ, ಶಾಲಾಭಿವೃದ್ಧಿ, ಸಲಹಾ ಮಂಡಳಿ, ಹಿತೈಷಿಗಳ ಬಳಗ, ಪೋಷಕರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ವರ್ಗದೊಂದಿಗೆ ವಿದ್ಯಾರ್ಥಿಗಳು ಸೇರಿ ಸ್ವಚ್ಛತೆಯ ಕಾಯಕವನ್ನು ನಡೆಸಿದರು.